Connect with us

Cinema

ಎಸ್‍ಪಿಬಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಜಗನ್ ಒತ್ತಾಯ

Published

on

ನವದೆಹಲಿ: ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಭಾರತದ ಸಿನಿ ರಂಗಕ್ಕೆ ಎಸ್‍ಪಿಬಿ ಅವರು ನೀಡಿರುವ ವಿಶೇಷ ಸೇವೆಗಳನ್ನು ಗುರುತಿಸಿ ಭಾರತ್ನ ರತ್ನ ಪ್ರಶಸ್ತಿ ನೀಡುವಂತೆ ಜಗನ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ನಮ್ಮ ರಾಜ್ಯದ ನೆಲ್ಲೂರು ಜಿಲ್ಲೆ ಎಸ್‍ಪಿಬಿ ಅವರ ಹುಟ್ಟೂರಾಗಿರುವುದು ನಮ್ಮ ಪುಣ್ಯ. ಅವರ ಅಗಲಿಕೆಯಿಂದ ರಾಜ್ಯ, ದೇಶಕ್ಕೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಅವರು 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಅವರಿಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಪ್ರದಾನವಾಗಿದೆ. ಈ ಹಿಂದೆ ಹಲವು ಖ್ಯಾತ ಗಾಯಕರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಎಸ್‍ಪಿಬಿ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.

ಎಸ್‍ಪಿಬಿ ಅವರ ಅಂತ್ಯಸಂಸ್ಕಾರದ ವೇಳೆ ಹಾಜರಾಗಿದ್ದ ಆಂಧ್ರ ಪ್ರದೇಶ ಜಲಸಂಪನ್ಮೂಲ ಸಚಿವ ಅನಿಲ್ ಕುಮಾರ್ ಯಾದವ್ ಅವರು, ಎಸ್‍ಪಿಬಿ ಅವರು ಜನಿಸಿದ್ದ ನೆಲ್ಲೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಸೋಮವಾರ ಚೆನ್ನೈನಲ್ಲಿ ಮಾತನಾಡಿದ್ದ ಎಸ್‍ಪಿಬಿ ಪುತ್ರ ಚರಣ್ ಅವರು, ತಂದೆಯವರ ಸೇವೆಗಳನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೂಡ ಎಸ್‍ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಕೂಗು ಜೋರಾಗಿದೆ. ಇದರ ನಡುವೆಯೇ ಸಿಎಂ ಜಗನ್ ಪತ್ರ ಬರೆದಿದ್ದಾರೆ.

Click to comment

Leave a Reply

Your email address will not be published. Required fields are marked *