Recent News

ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

ಅಮರಾವತಿ: ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಜನತೆಗೆ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸ್ಥಳೀಯ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಿರಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೋಮವಾರ ನಡೆದ ಅಧಿವೇಶನದಲ್ಲಿ ಆಂಧ್ರ ಪ್ರದೇಶದ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ-2019 ಸಂಬಂಧಿಸಿದ ಮಸೂದೆ ಪಾಸ್ ಆಗಿದೆ.

ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಕೈಗಾರಿಕೆಗಳು, ಫ್ಯಾಕ್ಟರಿಗಳು, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಜಂಟಿ ಉದ್ಯಮಗಳು ಹಾಗೂ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75 ರಷ್ಟು ಉದ್ಯೋಗ ಮೀಸಲಿಡಬೇಕು ಎನ್ನವ ಅಂಶ ಒಳಗೊಂಡಿದೆ. ಅಷ್ಟೇ ಅಲ್ಲದೇ ಖಾಸಗಿ ಸಂಸ್ಥೆಗಳು ಸ್ಥಳೀಯ ಯುವಜನತೆಯಲ್ಲಿ ಕೌಶಲ್ಯವಿಲ್ಲ ಎಂದು ದೂರುವಂತಿಲ್ಲ. ಸರ್ಕಾರದ ಸಹಭಾಗಿತ್ವದಲ್ಲಿ ಅವರಿಗೆ ತರಬೇತಿ ನೀಡಬೇಕಾಗುತ್ತದೆ.

ಈ ಹಿಂದೆ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ವೇಳೆ ಈ ಭರವಸೆಯನ್ನು ನೀಡಿದ್ದರು. ಚುನಾವಣೆಯ ವೇಳೆ ಜಗನ್ ಅವರ ಪ್ರಣಾಳಿಕೆಯ ಅಂಶ ಕೂಡ ಆಗಿತ್ತು.

ಕಾಯ್ದೆ ಜಾರಿಯಾದ ಬಳಿಕ ಆಂಧ್ರ ಪ್ರದೇಶದ 1.33 ಲಕ್ಷ ಗ್ರಾಮಗಳಲ್ಲಿ ಯುವಜನತೆ ಉದ್ಯೋಗಿಗಳಾಗುತ್ತಾರೆ. ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಯುವಜನತೆಗೆ ಉದ್ಯೋಗ ನೀಡುವ ಕೋಟಾವನ್ನು ಶೀಘ್ರ ಜಾರಿಗೆ ತರಬೇಕು ಎಂದು ತಿಳಿಸಿದರು.

ಹಲವು ರಾಜ್ಯಗಳು ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗ ಕಾಯ್ದಿರಿಸುವ ಕಲ್ಪನೆಯನ್ನು ಮುಂದಿಟ್ಟಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮೀಸಲಿರಿಸುವ ಕಾನೂನು ರೂಪಿಸುವ ಭರವಸೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *