Wednesday, 23rd October 2019

ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

ಹೈದರಾಬಾದ್: ವಿಧಾನಸಭೆ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳನ್ನು ಆಂಧ್ರ ಪ್ರದೇಶದ ಮಾಜಿ ಸ್ಪೀಕರ್ ತಮ್ಮ ಮನೆಗೆ ಹೊತ್ತೊಯ್ದಿರುವ ಅಪರೂಪದ ಘಟನೆ ನಡೆದಿದೆ.

ಕಳೆದ ವಾರ ಹೈದರಾಬ್‍ನಿಂದ ಅಮರಾವತಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ವಿಧಾನಸಭೆಯ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳು ಕಳೆದು ಹೋಗಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದು, ಈ ವೇಳೆ ಪೀಠೋಪಕರಣಗಳನ್ನು ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರ ಸತ್ತೇನಪಲ್ಲಿ ಮನೆಗೆ ತೆಗೆದುಕೊಂಡು ಹೋದ ವಿಚಾರ ಬೆಳಕಿಗೆ ಬಂದಿದೆ.

ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರಿಗೆ ಪತ್ರ ಬರೆದರೂ ಸಹ ಅವರು ಉತ್ತರಿಸಲಿಲ್ಲ. ಸ್ಥಳಾಂತರದ ಲಾಭವನ್ನೇ ಬಳಸಿಕೊಂಡು ಪೀಠೋಪಕರಣಗಳನ್ನು ಹೊತ್ತೊಯ್ದಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಪವಿತ್ರ ಸಂಸ್ಥೆಯ ಉಪಕರಣಗಳನ್ನು ಕದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿವೆ. ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಕಾರ್ಯಕರ್ತರು ಈ ಕೃತ್ಯದ ಕುರಿತು ಟೀಕಿಸಿದ್ದು, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇಷ್ಟೆಲ್ಲ ಆರೋಪಗಳು ಕೇಳಿ ಬಂದ ನಂತರ, ಕಡೆಗೂ ಮಾಜಿ ಸ್ಪೀಕರ್ ಶಿವಪ್ರಸಾದ್ ಅವರು ಕೆಲ ಉಪಕರಣಗಳನ್ನು ಸತ್ತೇನಪಲ್ಲಿಯ ಕ್ಯಾಂಪ್ ಆಫೀಸ್‍ಗೆ ಸ್ಥಳಾಂತರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ನಾನು ಕದಿಯುವ ದೃಷ್ಟಿಯಿಂದ ಅವುಗಳನ್ನು ಕೊಂಡೊಯ್ದಿಲ್ಲ. ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಗಳು ಹಾಳಾಗುತ್ತಿದ್ದವು. ಹೀಗಾಗಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ನನ್ನ ಕಚೇರಿಗೆ ಸ್ಥಳಾಂತರಿಸಿದೆ. ನನ್ನ ಕಚೇರಿಗೆ ತಂದಿರುವ ಪೀಠೋಪಕರಣಗಳು ಹಾಗೂ ಅದಕ್ಕಾಗುವ ವೆಚ್ಚವನ್ನು ಭರಿಸಲು ಸಿದ್ಧನಿದ್ದೇನೆ ಎಂದು ಶಿವಪ್ರಸಾದ್ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಈ ವಸ್ತುಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ತಿಳಿಸಿದ್ದಾರೆ.

ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಹಿರಿಯ ನಾಯಕರು ತೀವ್ರವಾಗಿ ಟೀಕಿಸಿದ್ದು, ನಾವು ಸ್ಪೀಕರ್ ಅವರಿಗೆ ಅವಮಾನ ಮಾಡುತ್ತಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಈ ಕೆಲಸವನ್ನು ಮಾಡಿದ್ದರೆ ನೀವು ಅವನನ್ನು ಏನೆಂದು ಕರೆಯುತ್ತಿದ್ದಿರಿ. ಕಳ್ಳನೆಂದು ಕರೆಯುತ್ತಿದ್ದಿರಲ್ಲವೇ ಎಂದು ಆಂಧ್ರ ಪ್ರದೇಶದ ಕೃಷಿ ಸಚಿವ ಕಣ್ಣಾ ಬಾಬು ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *