Tuesday, 10th December 2019

‘ಅಂದವಾದ’ ಟೀಸರ್ ಬಿಡುಗಡೆ

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಅಂದವಾದ ಚಿತ್ರವು ಸದ್ಯ ತನ್ನ ಟೀಸರ್‌ನಿಂದಲೇ ಸದ್ದು ಮಾಡುತ್ತಿದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ. ವಿಜಯಪ್ರಕಾಶ್ ಹಾಡಿರುವ ಟೈಟಲ್‍ ಸಾಂಗ್ ಮತ್ತು ಪ್ಯಾಥೋಸಾಂಗ್, ಸೋನುನಿಗಮ್, ಆಲಾ ಬಿ ಬಾಲಾ ಅವರ ಹಾಡುಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಇದೀಗ ಅಂದವಾದ ಚಿತ್ರದ ಟೀಸರ್ ಕೂಡ ಗಮನ ಸೆಳೆಯುತ್ತಿದೆ. ಅದಕ್ಕೆ ಮುಖ್ಯ ಕಾರಣ ಕುರುಕ್ಷೇತ್ರ. ದರ್ಶನ್ ನಟನೆಯ ಕುರುಕ್ಷೇತ್ರ ಚಿತ್ರದ ಜೊತೆಗೆ ಅಂದವಾದ ಚಿತ್ರದ ಟೀಸರನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸಿನಿಮಾ ನೋಡಲು ಬಂದವರೆಲ್ಲಾ ಅಂದವಾದ ಚಿತ್ರದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಈ ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರೋದು ಹೊಸಬರ ತಂಡಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ.

ಇಡೀ ಸಿನಿಮಾವನ್ನು ಮಾನ್ಸೂನ್ ಫೀಲ್‍ನಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ಚಲ, ಹಾಡುಗಳನ್ನೂ ಮಾನ್ಸೂನ್‍ನಲ್ಲೇ ಹೊರತಂದಿದ್ದರು. ಅಲ್ಲದೆ ಮುಂಗಾರು ಮಳೆ, ಗಾಳಿಪಟ ಮೊದಲಾದ ಚಿತ್ರಗಳ ಅಪರೂಪದ ಕಾಂಬಿನೇಷನ್ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ಹೃದಯಶಿವ ತುಂಬಾ ವರ್ಷಗಳ ನಂತರ ಒಂದಾಗಿ ‘ಅಂದವಾದ’ ಹಾಡುಗಳಿಗೆ ಸಾಹಿತ್ಯ ಒದಗಿಸಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ಸಂಗೀತ ನಿರ್ದೇಶಕ ಗುರುಕಿರಣ್ ಅವರ ಆಡಿಯೋ ಕಂಪನಿಯಲ್ಲೇ ಹಾಡುಗಳನ್ನು ಹೊರತಂದಿರೋದು ಚಿತ್ರದ ಹೆಚ್ಚುಗಾರಿಕೆ.

ಇಡೀ ಸಿನಿಮಾವನ್ನು ಮಳೆಗಾಲದಲ್ಲೇ ಚಿತ್ರೀಕರಿಸಿರೋದು ವಿಶೇಷ. ಮಾನ್ಸೂನ್‍ನಲ್ಲಿ ನಡೆಯುವ ಬೆಚ್ಚಗಿನ ಪ್ರೇಮಕಥೆ ಇದಾಗಿದ್ದು, ಅದಕ್ಕೆ ತಕ್ಕಂಥ ಹಾಡುಗಳೂ ಚಿತ್ರದಲ್ಲಿವೆ. ಅಲ್ಲದೇ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾದರೂ, ನಗ್ತಾ ನಗ್ತಾನೇ ಅಳಿಸುವಂಥ ಕಥೆಯಿದೆ. ವಿಕ್ರಮ್ ವರ್ಮನ್ ಚಿತ್ರದ ಏಳು ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಗುರುಕಿರಣ್‍ರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ತಲಾ ಎರಡೆರಡು ಹಾಡಿಗೆ, ಇನ್ನುಳಿದಂತೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇನ್ನು ಮೊನ್ನೆ ರಿಲೀಸ್ ಆಗಿರುವ ಟೀಸರ್‌ಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲರೂ ತಂತಮ್ಮ ಹುಡುಗಿಯರಿಗೆ ತಾಜಮಹಲ್ ತೋರಿಸ್ಬೇಕು ಅನ್ಕೋಳ್ತಾರೆ. ಆದ್ರೆ, ತಾಜ್‍ಮಹಲ್‍ಗೆ ನಮ್ ಹುಡ್ಗೀನ ತೋರಿಸ್ಬೇಕು ಅನ್ಕೊಂಡಿದ್ದೀನಿ ಎಂಬ ಡೈಲಾಗ್ ಇರುವ ಈ ಟೀಸರ್ ನೋಡಿದವರು ಫಿದಾ ಆಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆಯಿದೆ’ ಎನ್ನುತ್ತಾರೆ ನಿರ್ದೇಶಕ ಚಲ.

ಜೈ ಹಾಗೂ ಅನುಷಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸಕಲೇಶಪುರ, ಬಿಸಿಲೆ ಘಾಟ್, ಚಿಕ್ಕಮಗಳೂರು ಹಾಗೂ ಅಂಡಮಾನ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್.ಮಧು ಜಿ. ರಾಜ್ ಹಾಗೂ ಹೆಚ್.ಸಿ. ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *