Tuesday, 25th February 2020

Recent News

ಪಂಚಭೂತಗಳಲ್ಲಿ `ಅನಂತ’ ಲೀನ!

ಬೆಂಗಳೂರು: ಅದಮ್ಯ ಚೇತನ, ದೆಹಲಿಯ ಕನ್ನಡದ ಧ್ವನಿ, ಬಡವರ ಬಂಧು, ಧೀಮಂತ ನಾಯಕ, ಸ್ನೇಹ ಜೀವಿ, ಕರ್ನಾಟಕ ಬಿಜೆಪಿಯ ಆಧಾರಸ್ತಂಭ ಅನಂತಕುಮಾರ್ ಇನ್ನು ನೆನಪು ಮಾತ್ರ. ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು.

ಪುರೋಹಿತ ಶ್ರೀನಾಥ್ ಅವರ ನೇತೃತ್ವದಲ್ಲಿ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಅನಂತ್ ಕುಮಾರ್ ಅವರ ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗವಹಿಸಿದ್ದರು.

ವೈದಿಕ ಸಂಪ್ರದಾಯದ ಪ್ರಕಾರ ಸೂರ್ಯಾಸ್ತಕ್ಕೂ ಮುನ್ನ ಅಂತ್ಯಸಂಸ್ಕಾರದ ಎಲ್ಲಾ ಪ್ರಕ್ರಿಯೆ ಪೂರ್ಣವಾಗಬೇಕು. ಹೀಗಾಗಿ ಮಧ್ಯಾಹ್ನವೇ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿದರು. ಇತ್ತ ಭಾರತೀಯ ಸೇನೆಯು ಕುಶಾಲುತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿತು.

ಭಾನುಪ್ರಕಾಶ್ ಶರ್ಮ, ಪ್ರಸನ್ನ ಕುಮಾರ್, ಸುಶಾಂತ್ ಶರ್ಮ, ವೆಂಕಟ ಚಲಪತಿ ಶಾಸ್ತ್ರಿಗಳು ವಿಧಿವಿಧಾನ ಮಾಡಿದರು. ಈ ವೇಳೆ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಂತಿ ಮಂತ್ರ ಪಠಣ ಮಾಡಲಾಯಿತು. ಮಕ್ಕಳ ಪರವಾಗಿ ಸಹೋದರ ನಂದಕುಮಾರ್ ವಿಧಿವಿಧಾನ ನೆರವೇರಿಸಿದರು. ಅನಂತ್‍ಕುಮಾರ್ ವಿಧಿವಶರಾಗಿ ಇಂದಿಗೆ 3 ದಿನಗಳು ಕಳೆದಿದ್ದು, ಪ್ರಾಯಶ್ಚಿತ ಮಾಡಲಾಗುತ್ತಿದೆ ಎಂದು ಪುರೋಹಿತ ಶ್ರೀನಾಥ್ ತಿಳಿಸಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿನ್ನೆ ಅಂತಿಮ ದರ್ಶನ ಪಡೆದಿದ್ದರು.

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ಬಸವನಗುಡಿಯಲ್ಲಿರುವ ನಿವಾಸದಿಂದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಮೆರವಣಿಗೆಯ ಮೂಲಕ ತರಲಾಗಿತ್ತು. ಕಚೇರಿಯಲ್ಲಿ ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಥಿವ ಶರೀರ ಇಡಲಾಗಿತ್ತು. ಈ ವೇಳೆ ಬಿಜೆಪಿ ನಾಯಕರು ಹಾಗೂ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಬಂದು ಕೇಸರಿ ನಾಯಕರ ಅಂತಿಮ ದರ್ಶನ ಪಡೆದರು. ಹೀಗಾಗಿ ಕಚೇರಿ ಸುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಒಬ್ಬರು ಡಿಸಿಪಿ, 5 ಇನ್ಸ್ ಪೆಕ್ಟರ್, 6 ಸಬ್ ಇನ್ಸ್ ಪೆಕ್ಟರ್, 220 ಪೊಲೀಸ್ ಕಾನ್ಸ್ ಟೇಬಲ್ ನಿಯೋಜಿಸಲಾಗಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಮೃತದೇಹಕ್ಕೆ ಮಾಲಾರ್ಪಾಣೆ ಮಾಡಿ ಅಂತಿಮ ಗೌರವ ಸಲ್ಲಿಸಿದರು. ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅಶ್ವಿನ್ ಚೌಬೆ, ರಾಮಲಾಲ್, ಮುರಳೀಧರ್ ರಾವ್, ಅನುರಾಗ್ ಠಾಕೂರ್, ಡಿವಿಎಸ್ ಸೇರಿದಂತೆ ಗಣ್ಯರಿಂದ ಅಂತಿಮ ನಮನ ಸಲ್ಲಿಸಿದರು. ಒಂದು ಕಡೆ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ ಇನ್ನೊಂದೆಡೆ ಅನಂತ್ ಕುಮಾರ್ ಅಮರ್ ರಹೇ ಎಂಬ ಘೋಷವಾಕ್ಯಗಳು ಕೇಳಿಬಂದಿತ್ತು.

ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಸ್ತುವಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೂವರು ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ರವಿಕುಮಾರ್, ಅರವಿಂದ ಲಿಂಬಾವಳಿ ಸ್ಥಳದಲ್ಲೇ ಮೇಲ್ವಿಚಾರಣೆ ನಡೆಸಿದ್ದರು. ಬಿಜೆಪಿ ಕಚೇರಿಯಿಂದ ಅನಂತ್ ಕುಮಾರ್ ಅವರ ಪಾರ್ಥಿವ ಶರೀರವನ್ನು ನ್ಯಾಷನಲ್ ಕಾಲೇಜ್‍ಗೆ ಸಾಗಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಅಲ್ಲಿಂದ ಚಾಮರಾಜಪೇಟೆ ಹಿಂದೂ ರುದ್ರಭೂಮಿಗೆ ಸಾಗಿಸಲಾಯಿತು. ಅಲ್ಲಿ ವಿಧಿ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಶ ಮಾಡಲಾಯಿತು.

ಅಂತ್ಯಸಂಸ್ಕಾರದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಜ್ಯಾಧ್ಯಕ್ಷದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರಾಜನಾಥ್‍ಸಿಂಗ್, ಮುರಳೀಧರ್ ರಾವ್, ಅನುರಾಗ್ ಠಾಕೋರ್, ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *