Tuesday, 16th July 2019

ಮನೆಯ ಹಾಲ್‍ನ ಒಳಗೆ ಸಿಕ್ಕಿತು ವಿಗ್ರಹ- ಭೂಮಿ ಅಗೆದಾಗ 6 ಅಡಿ ಕೆಳಗೆ ಸಿಕ್ಕಿತು ಸಾವಿರ ವರ್ಷದ ಹಿಂದಿನ ಬಿಂಬ

ಉಡುಪಿ: ಪರಶುರಾಮ ಸೃಷ್ಟಿ ಎಂದೇ ಖ್ಯಾತವೆತ್ತಿರುವ ಕರಾವಳಿಯಲ್ಲಿ ಮತ್ತೆ ನಾಗದೇವರ ಪವಾಡ ನಡೆದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ಮನೆಯ ಚಾವಡಿಯ ಭಾಗದಲ್ಲಿ ಭೂಮಿಯೊಳಗೆ ಹುದುಗಿ ಹೋಗಿದ್ದ ನಾಗ ದೇವರ ವಿಗ್ರಹ ಕಂಡು ಬಂದಿದೆ.

ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ದಿವ್ಯದೃಷ್ಟಿಯಿಂದ ಹೇಳಿದ ಮಾತು ಸತ್ಯವಾಗಿದೆ. ನಿಮ್ಮ ಮನೆಯ ಹಾಲಿನ ಕೆಳಭಾಗದಲ್ಲಿ ಭೂಮಿಯೊಳಗೆ ನಾಗನ ಬಿಂಬವಿದೆ ಎಂದು ಹೇಳಿದ್ದರು. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪವಾಡ ಸದೃಶವಾಗಿ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ ಮುದ್ರಾಡಿಯ ಬರ್ಸಬೆಟ್ಟು ಮನೆಯಲ್ಲಿ ಯಾರಿಗೂ ನೆಮ್ಮದಿ ಇರಲಿಲ್ಲ. ಅಷ್ಟಮಂಗಲ ಪ್ರಶ್ನೆ, ಪೂಜೆ ಪುನಸ್ಕಾರ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ.

ಟ್ರಾನ್ಸ್ ಪೋರ್ಟ್, ಶೋರೂಂ ಇಟ್ಟಿರುವ ಉದ್ಯಮಿ ಗಂಗಾಧರ ಶೆಟ್ಟಿ ಮುಂಬೈನಲ್ಲಿ ನೆಲೆಸಿರುತ್ತಾರೆ. ಉದ್ಯಮದಲ್ಲಿ ಹೆಸರು, ಸಂಪಾದನೆ ಮಾಡಿದ ನಂತರ ಮುದ್ರಾಡಿಯಲ್ಲಿ ಒಂದು ಬಂಗಲೆ ಕಟ್ಟಿಸಿದ್ದರು. ಆ ಹಳ್ಳಿಯಲ್ಲೇ ಅದು ದೊಡ್ಡ ಮನೆತನವೂ ಆಗಿತ್ತು. ಆದರೆ ಹೊಸ ಮನೆಯಲ್ಲಿ ಗಂಗಾಧರ ಶೆಟ್ಟರಿಗೆ ನೆಮ್ಮದಿ ಇರಲಿಲ್ಲ. ಉದ್ಯಮದಲ್ಲೂ ಲಾಭ ಆಗಲಿಲ್ಲ. ಕೊನೆಗೆ ಆಧ್ಯಾತ್ಮ ಚಿಂತನೆಗೆ ಅಂತ ನಾಗಾರಾಧಕರಾದ ತೀರ್ಥಹಳ್ಳಿಯ ನಾಗರಾಜ್ ಭಟ್ ಅವರನ್ನು ಭೇಟಿ ಆದರು. ಅವರು ಕೊಟ್ಟ ಸಲಹೆ ವಿಚಿತ್ರವಾಗಿತ್ತು.

ಮನೆಯ ಹಾಲ್‍ನಲ್ಲಿ ಸಮಸ್ಯೆ:
ನಿಮ್ಮ ಮನೆಯ ಹಾಲ್‍ನಲ್ಲಿ ಸಮಸ್ಯೆ ಇದೆ. ನಿಮಗಿರುವ ಎಲ್ಲಾ ತೊಂದರೆಗೂ ನಾಗದೋಷವೇ ಕಾರಣ. ಹಾಲಿನ ಮಾರ್ಬಲ್ ಅಗೆದು ಆರಡಿ ಒಳ ಹೋದರೆ ಒಂದು ನಾಗ ವಿಗ್ರಹ ಸಿಗುತ್ತೆ ಅಂತ ಚಿತ್ರವನ್ನೂ ಬಿಡಿಸಿಕೊಟ್ಟರು. ಭಟ್ಟರ ಮಾತು ನಂಬುವಂತಿರಲಿಲ್ಲ. ಆದರೂ ಆಗಿಯೇ ಬಿಡಲಿ ಅಂತ, ಕೋಣೆಯ ನೆಲ ಅಗೆಯಲಾಯ್ತು. ನಾಗರಾಜ್ ಭಟ್ ಹೇಳಿದಂತೆ ಆರಡಿ ಆಳದಲ್ಲಿ ಪುರಾತನ ನಾಗ ವಿಗ್ರಹ ಪತ್ತೆಯೂ ಆಗಿದೆ. ನಾಗರಾಜ್ ಭಟ್ ಸ್ಥಳದಲ್ಲೇ ಇದ್ದು ಮಾರ್ಗದರ್ಶನ ಮಾಡುತ್ತಿದ್ದರು. ಇದು ಸಾವಿರಾರು ವರ್ಷಗಳ ಹಳೆಯ ವಿಗ್ರಹ ಅನ್ನೋದು ತಿಳಿದುಬಂದಿದೆ.

ಈ ನಾಗನ ಪ್ರತಿಮೆಗೆ ಜೈನರ ಕಾಲದಲ್ಲಿ ಆರಾಧನೆಯಾಗುತ್ತಿದ್ದು ಬಳಿಕ ಭೂಗರ್ಭ ಸೇರಿತ್ತು. ಕಾಲಾಂತರದಲ್ಲಿ ಗಂಗಾಧರ ಶೆಟ್ಟರು ಅದೇ ಜಾಗದಲ್ಲಿ ಮನೆ ಕಟ್ಟಿಸಿದ್ದರು. ಆದರೆ ನಾಗ ದೋಷದಿಂದ ಅವರಿಗೆ ತೊಂದರೆ ಆಯ್ತು. ಹೂತಿದ್ದ ವಿಗ್ರವನ್ನು ನಿಗದಿತ ಸ್ಥಳದಲ್ಲೇ ಪತ್ತೆಮಾಡಿದ್ದು ಈ ಪವಾಡ ವಿಶೇಷ. ನಾಗರಾಜ್ ಭಟ್ ಈ ಹಿಂದೆಯೂ ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಹಲವೆಡೆ ಮನೆಯೊಳಗೆ ಹೂತು ಹೋಗಿದ್ದ ನಾಗ ವಿಗ್ರಹ ಪತ್ತೆ ಮಾಡಿದ್ದರು.

ನಾಗಪಾತ್ರಿ ನಾಗರಾಜ ಭಟ್ ಮಾತನಾಡಿ, ಅಘೋರಿ ಶಕ್ತಿಯಿಂದ ನನಗೆ ನಾಗನ ಬಿಂಬದ ಗೋಚರವಾಗುತ್ತದೆ. ಮುದ್ರಾಡಿಯಲ್ಲೂ ಇದೇ ರೀತಿ ಆಗಿದೆ. ಪೆರ್ಡೂರು, ಹೆಬ್ರಿ ವ್ಯಾಪ್ತಿಯಲ್ಲಿ ಎರಡು ನಾಗನ ಕಲ್ಲುಗಳನ್ನು ಮೇಲಕ್ಕೆತ್ತಿ ಪೂಜಾ ವಿಧಿವಿಧಾನ ಮಾಡಲಾಗಿದೆ. ದೇವರ ವಿಗ್ರಹ ಭೂಮಿಯೊಳಗಿದ್ದು ಅದರ ಮೇಲೆ ಕಟ್ಟಡ, ಮನೆ ನಿರ್ಮಾಣ ಆದರೆ ಅಲ್ಲಿ ಸಮಸ್ಯೆಗಳು ಬರುತ್ತದೆ. ಈಗ ಕುಟುಂಬಕ್ಕೂ ನೆಮ್ಮದಿ ಪ್ರಾಪ್ತಿಯಾಗಿದೆ. ಸಿಕ್ಕ ನಾಗನ ಕಲ್ಲಿನ ಪುನರ್ ಪ್ರತಿಷ್ಠಾಪನೆ ಆಗಬೇಕಿದೆ. ಆಶ್ಲೇಷ ಬಲಿ ವಿಧಾನಗಳು ನಡೆಯಲಿದೆ.

ಮನೆಯ ಮಾಲೀಕ ಗಂಗಾಧರ ಶೆಟ್ಟಿ ಮಾತನಾಡಿ, ನಮ್ಮ ವ್ಯವಹಾರ, ಕುಟುಂಬದ ಸಮಸ್ಯೆಗೆ ಹಲವಾರು ಪರಿಹಾರ ಮಾಡಿದೆವು. ಆದರೆ ಮನೆಯೊಳಗೆ ನಾಗನ ಕಲ್ಲಿದೆ ಅಂತ ಗೊತ್ತೇ ಇರಲಿಲ್ಲ. ನಾಗರಾಜ ಭಟ್ಟರ ಬಗ್ಗೆ ತಿಳಿದು ಅವರನ್ನು ಸಂಪರ್ಕ ಮಾಡಿ ಪರಿಹಾರ ಮಾಡಿದ್ದೇವೆ. ದೇವರಿಗೆ ಇಲ್ಲೊಂದು ಗುಡಿ ನಿರ್ಮಾಣ ಮಾಡುವ ಇಚ್ಛೆ ಇದೆ. ದೇವರ ಮನೋಭಿಲಾಷೆಯನ್ನು ಈಡೇರಿಸುತ್ತೇನೆ ಎಂದು ಹೇಳಿದರು. ಈ ಪವಾಡದ ನಂತರ ಮನೆಯಲ್ಲಿ ನೆಮ್ಮದಿ ನೆಲೆಸಬಹುದು ಎಂಬ ನಂಬಿಕೆಯಿಂದ ಗಂಗಾಧರ ಶೆಟ್ಟಿ ಮುಂಬೈ ಸೇರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *