Connect with us

Latest

ಮೋದಿ ದೇಶದ ಪಿತಾಮಹ ಎಂದ ಮಹಾರಾಷ್ಟ್ರ ಸಿಎಂ ಪತ್ನಿ

Published

on

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಆದರೆ ಈ ವೇಳೆ ರಾಷ್ಟ್ರದ ಪಿತಾಮಹ ಮೋದಿ ಎಂದು ಟ್ವೀಟ್ ಮಾಡಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಸಾವಿರಾರು ಜನರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಈ ನಡುವೆ ಅಮೃತಾ ಫಡ್ನವಿಸ್ ಕೂಡ ಸೇರಿದ್ದಾರೆ. ಆದರೆ ಅಮೃತ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿರುವುದು ಈಗ ಚರ್ಚೆಗೆ ಕಾರಣವಾಗಿದೆ. ತಮ್ಮ ಟ್ವೀಟ್‍ನಲ್ಲಿ ಅಮೃತಾ ಅವರು, ಸಮಾಜ ಸುಧಾರಣೆಗಾಗಿ ಕೆಲಸ ಮಾಡುವಂತೆ ನಮನ್ನು ಹುರಿದುಂಬಿಸಿ, ಪ್ರೇರೇಪಿಸಿರುವ ನಮ್ಮ ದೇಶದ ಪಿತಾಮಹ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು #HappyBirthdayPM ಮತ್ತು #happybirthdaynarendramodi ಎಂಬ ಹ್ಯಾಷ್ ಟ್ಯಾಗ್‍ಗಳ ಜೊತೆ ಪೋಸ್ಟ್ ಮಾಡಿದ್ದರು.

ಮೋದಿ ಅವರನ್ನು ನಮ್ಮ ದೇಶದ ಪಿತಾಮಹ ಎಂದು ಕರೆದು ಈಗ ಅಮೃತಾ ಅವರು ಪೀಕಲಾಟಕ್ಕೆ ಬಿದ್ದಿದ್ದಾರೆ. ಹೌದು. ಯಾಕೆಂದರೆ ಅಮೃತಾ ಅವರ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಒಂದು ರಾಜ್ಯದ ಸಿಎಂ ಪತ್ನಿಯಾಗಿದ್ದರೂ ದೇಶದ ಪಿತಾಮಹ ಯಾರೆಂದು ತಿಳಿದಿಲ್ಲ ಎಂದು ಕಾಲೆಳೆದಿದ್ದಾರೆ.

ಮಹಾತ್ಮ ಗಾಂಧೀಜಿ ಮಾತ್ರ ನಮ್ಮ ದೇಶದ ಪಿತಾಮಹ ಎಂದು ಕೆಲವರು ಮಾತಿನ ಚಾಟಿ ಬೀಸಿದ್ದಾರೆ. ಅಲ್ಲದೆ ಕಮೆಂಟ್ ಮೇಲೆ ಕಮೆಂಟ್ ಮಾಡುತ್ತಾ ಅಮೃತಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಧಾನಿ ಮೋದಿ ಯಾವಾಗ ನಮ್ಮ ದೇಶದ ಪಿತಾಮಹರಾದರು? ನಮ್ಮ ದೇಶ ಎಲ್ಲಿ ಸುಧಾರಣೆಯಾಗಿದೆ? ಈಗ ದೇಶದಲ್ಲಿ ಮೊದಲಿಗಿಂತಲೂ ನಿರುದ್ಯೋಗ ಹೆಚ್ಚಾಗಿದೆ, ಆರ್ಥಿಕ ಕುಸಿದಿದೆ. ಸಮಾಜ ಸುಧಾರಣೆ ಎಂದರೆ ಇದೇನಾ ಎಂದು ಪ್ರಶ್ನಿಸಿ ನೆಟ್ಟಿಗರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.