Sunday, 24th March 2019

Recent News

8 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ವೀರ ರಾವಣ

ಚಂಡೀಗಢ: ವಿಜಯದಶಮಿಯ ಪ್ರಯುಕ್ತ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾಮಲೀಲಾ ಕಾರ್ಯಕ್ರಮ ನಡೆಯುತ್ತಿತ್ತು. ರಾವಣನ ವೇಷಧಾರಿಯಾದ 24 ವರ್ಷದ ದಲ್ಬೀರ್ ಸಿಂಗ್ ರೈಲು ಹಳಿಯ ಮೇಲೆ ನಿಂತಿದ್ದ ಜನರನ್ನ ದೂಡಿ ತನ್ನ ಪ್ರಾಣ ತ್ಯಾಗ ಮಾಡಿ 8 ಮಂದಿಯ ಜೀವವನ್ನ ಉಳಿಸಿದ್ದಾರೆ.

ರಾಮಲೀಲಾ ಕಾರ್ಯಕ್ರಮವನ್ನ ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ರಾವಣ ದಹನ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ರೈಲಿನ ಹಳಿಯ ಮೇಲೆ ನಿಂತಿದ್ದ ಜನರ ಮೇಲೆ ರೈಲು ಬರುವುದನ್ನ ಗಮನಿಸಿದ ದಲ್ಬೀರ್ ಸಿಂಗ್, ಜನರನ್ನ ಹಳಿ ಬಿಟ್ಟು ಹೋಗುವಂತೆ ಕೂಗಿ ಹೇಳಿದ್ದಾರೆ. ಅಲ್ಲದೆ ಹಲವರನ್ನು ಹಳಿಯಿಂದ ಹೊರಗೆ ದೂಡಿದ್ದಾರೆ. ಆದರೆ ಕೊನೆಯಲ್ಲಿ ಹಳಿಯಿಂದ ಹೊರಬರಲಾಗದೇ ತಾವೇ ಪ್ರಾಣ ಕಳೆದುಕೊಂಡಿದ್ದಾರೆ.

ಎಲ್ಲರ ಮೆಚ್ಚಿನ ಪಾತ್ರಧಾರಿಯಾದ ದಲ್ಬೀರ್ ಸಿಂಗ್, ಪ್ರತಿ ವರ್ಷ ರಾವಣ ವೇಷಧಾರಿಯಾಗಿ ಎಲ್ಲರನ್ನ ಮನರಂಜಿಸುತ್ತಿದ್ದರು ಎಂದು ಅವರ ಸ್ನೇಹಿತ ರಾಜೇಶ್ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದ ಸಮೀಪವೇ ರೈಲು ಮಾರ್ಗ ಹಾದುಹೋಗಿತ್ತು. ಜನ ರೈಲು ಹಳಿಯ ಮೇಲೆ ನಿಂತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಕಾರ್ಯಕ್ರಮದಲ್ಲಿ ದೊಡ್ಡದಾದ ಪಟಾಕಿಗಳನ್ನು ಹೊಡೆಯುತ್ತಿದ್ದರಿಂದ ರೈಲು ಬರುತ್ತಿರುವ ಶಬ್ಧ ಯಾರಿಗೂ ಕೇಳಿಸಲಿಲ್ಲ. ಒಮ್ಮೆಲೆ ರೈಲು ಜನರ ಮೇಲೆಯೇ ಹರಿದಿತ್ತು. ಸ್ಥಳದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 700 ಮಂದಿ ಇದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: 20 ಜನರ ಪ್ರಾಣ ಉಳಿಸಿ ಗೋಕಾಕ್‍ನ ವೀರಯೋಧ ಹುತಾತ್ಮ!

ಈ ದುರಂತದಲ್ಲಿ ದಲ್ಬೀರ್ ಸಿಂಗ್ ಸೇರಿದಂತೆ 61 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಳಿಪಟ ನಿರ್ಮಾಣ ಮಾಡುವ ದಲ್ಬೀರ್ ಸಿಂಗ್ ಅವರು ತಮ್ಮ ಮನೆಯಲ್ಲಿ ಅಂಗಡಿ ಹೊಂದಿದ್ದು, ತಾಯಿ, ಪತ್ನಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ. ಈ ದುರಂತದ ನಂತರ ತನ್ನ ಸೊಸೆಗೆ ಸರ್ಕಾರ ಉದ್ಯೋಗ ನೀಡಲಿ ಎಂದು ದಲ್ಬೀರ್ ಸಿಂಗ್ ತಾಯಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಬೇಡಿಕೆ ಇಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *