– ಪಾಂಡವರ ಇತಿಹಾಸದೊಂದಿಗೆ ಬೆಸೆದಿರುವ ಮಳೆ ಮಲ್ಲೇಶ್ವರ ಕ್ಷೇತ್ರ
ಹಾಸನ: ಕನ್ನಡದ ‘ಪ್ರೇಮದ ಊರಲಿ’ (Premada Oorali) ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆದಿರುವ ಹಾಸನ ತಾಲ್ಲೂಕಿನ ಸೀಗೆ ಗ್ರಾಮದ ಗುಡ್ಡದಲ್ಲಿರುವ ಐತಿಹಾಸಿಕ ಮಳೆ ಮಲ್ಲೇಶ್ವರ ದೇವಾಲಯ ಇದೀಗ ಪ್ರವಾಸಿಗರ (Tourists) ಪ್ರಮುಖ ಆಕರ್ಷಣೆಯಾಗಿದೆ.
ಸಿನಿಮಾ ಮೆಗಾ ಹಿಟ್ ಆದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯದತ್ತ ಆಗಮಿಸುತ್ತಿದ್ದಾರೆ.
ಹಾಸನ ತಾಲ್ಲೂಕಿನ ಸೀಗೆ ಗ್ರಾಮದ ಗುಡ್ಡದ ಮೇಲಿರುವ ಮಳೆ ಮಲ್ಲೇಶ್ವರ ದೇವಾಲಯ (Male Malleshwara Temple) ತನ್ನ ಐತಿಹಾಸಿಕ ಹಿನ್ನೆಲೆ ಹಾಗೂ ನೈಸರ್ಗಿಕ ವಿಶೇಷತೆಗಳಿಂದಲೇ ಗಮನ ಸೆಳೆದಿತ್ತು. ಇದೀಗ ‘ಪ್ರೇಮದ ಊರಲಿ’ ಸಿನಿಮಾದ ಚಿತ್ರೀಕರಣ ನಡೆದ ಸ್ಥಳ ಎಂಬ ಖ್ಯಾತಿಯಿಂದಾಗಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾದಲ್ಲಿ ಕಾಣಿಸಿಕೊಂಡ ಪ್ರಮುಖ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಜನರು ತಂಡೋಪತಂಡವಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ವೀಕೆಂಡ್ಗಳಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ದೇವಾಲಯದ ಸುತ್ತಮುತ್ತ ಜನದಟ್ಟಣೆ ಹೆಚ್ಚಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲದೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿರುವುದು ಈ ಐತಿಹಾಸಿಕ ತಾಣದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಟ್ರಾಫಿಕ್ ಜಾಮ್ನಿಂದ ಪ್ರವಾಸಿಗರ ಪರದಾಟ
ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿದೆ. ವಾಹನಗಳ ಸಂಚಾರ ಸುಗಮಗೊಳಿಸಲು ಹಾಗೂ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ಸ್ಥಳವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿ ಆಗಮಿಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರ ಅನುಕೂಲಕ್ಕಾಗಿ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಗತ್ಯವೂ ಎದುರಾಗಿದೆ.
ಪಾಂಡವರ ಇತಿಹಾಸದೊಂದಿಗೆ ಬೆಸೆದಿರುವ ಮಳೆ ಮಲ್ಲೇಶ್ವರ ಕ್ಷೇತ್ರ
ಮಳೆ ಮಲ್ಲೇಶ್ವರ ದೇವಾಲಯವು ಐತಿಹಾಸಿಕ ಹಿನ್ನೆಲೆ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ, ಪಾಂಡವರು ವನವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಕುಡಿಯುವ ನೀರು ಸಿಗದೆ ದಾಹದಿಂದ ಬಳಲಿದ್ದರು. ಆಗ ಅರ್ಜುನನು ತನ್ನ ಬಾಣವನ್ನ ಬಂಡೆಗೆ ಹೊಡೆದು, ಅದರೊಳಗಿಂದ ನೀರನ್ನ ಹೊರತೆಗೆದು ದಾಹ ತಣಿಸಿಕೊಂಡಿದ್ದನು ಎಂಬ ಪ್ರತೀತಿ ಈ ಸ್ಥಳದೊಂದಿಗೆ ಬೆಸೆದುಕೊಂಡಿದೆ.
ಇಲ್ಲಿನ ಗುಹೆಯೊಳಗಿಂದ ನೀರು ಹರಿಯುವುದು ವಿಶೇಷ ಆಕರ್ಷಣೆಯಾಗಿದೆ. ಬಿರು ಬೇಸಿಗೆಯಲ್ಲಿಯೂ ಈ ನೀರು ಆವಿಯಾಗುವುದಿಲ್ಲ ಎಂಬ ನಂಬಿಕೆ ಸ್ಥಳದ ಮಹತ್ವವನ್ನ ಮತ್ತಷ್ಟು ಹೆಚ್ಚಿಸಿದೆ. ಈ ನೈಸರ್ಗಿಕ ವೈಶಿಷ್ಟ್ಯವನ್ನ ಕಣ್ತುಂಬಿಕೊಳ್ಳಲು ಭಕ್ತರು ಹಾಗೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಹುಣ್ಣಿಮೆಯಂದು ವಿಶೇಷ ಪೂಜೆ, 20 ಗ್ರಾಮಗಳು ಭಾಗಿ
ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಪ್ರತಿ ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯುತ್ತದೆ. ಈ ಪೂಜೆಯಲ್ಲಿ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಗ್ರಾಮಗಳ ಗ್ರಾಮಸ್ಥರು ಭಾಗವಹಿಸುತ್ತಾರೆ. ಧಾರ್ಮಿಕ ನಂಬಿಕೆ, ಸ್ಥಳೀಯ ಸಂಪ್ರದಾಯ ಹಾಗೂ ಐತಿಹ್ಯದ ಕಾರಣದಿಂದ ಈ ದೇವಾಲಯವು ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿಶೇಷ ಮಹತ್ವ ಹೊಂದಿದೆ.
