3,000 ಮಹಿಳಾ ಫ್ಯಾನ್ಸ್‌ ಭೇಟಿಯಾಗಲಿದ್ದಾರೆ ಧನುಷ್‌ – ʻಬಿಜೆಪಿಯ ಆಪರೇಷನ್ ಡಿʼ ಅಂತಾ ಕಾಂಗ್ರೆಸ್ ಆರೋಪ

2 Min Read

– ಧನುಷ್‌ ರಾಜಕೀಯ ಎಂಟ್ರಿ ಬಗ್ಗೆ ಜೋರಾದ ಚರ್ಚೆ – ಬಿಜೆಪಿ ಸೇರ್ತಾರಾ ನಟ?

ತಮಿಳುನಾಡಿನಲ್ಲಿ (Tamil Nadu) ದಳಪತಿ ವಿಜಯ್‌ ಅವರಂತೆ ನಟ ಧನುಷ್‌ (Dhanush) ಕೂಡ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸದ್ದು ಜೋರಾಗಿದೆ. ಈ ಮಧ್ಯೆ ನಟ ತಮ್ಮ ಅಧಿಕೃತ ಅಭಿಮಾನಿ ಸಂಘದ 3,000ಕ್ಕೂ ಹೆಚ್ಚು ಮಹಿಳಾ ಅಭಿಮಾನಿಗಳನ್ನ (Women Fans) ಭೇಟಿಯಾಗಲು ಮುಂದಾಗಿದ್ದಾರೆ.

ಧನುಷ್ ಅಭಿಮಾನಿ ಸಂಘದ ಹೆಸರನ್ನ ಅಧಿಕೃತವಾಗಿ ‘ಧನುಷ್ ನರ್ಪಣಿ ಇಯಕ್ಕಂ’ (ಧನುಷ್ ಕಲ್ಯಾಣ ಚಳುವಳಿ) ಎಂದು ಬದಲಾಯಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇದು ಧನುಷ್‌ ರಾಜಕೀಯ (Politics) ಪ್ರವೇಶ ಕುರಿತಾದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಜೋರಾಯ್ತು ಪಾಲಿಟಿಕ್ಸ್‌ ಚರ್ಚೆ
43 ವರ್ಷದ ನಟ, ಚೆನ್ನೈ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಅಭಿಮಾನಿ ಸಂಘದ ಮಹಿಳಾ ಪದಾಧಿಕಾರಿಗಳು ಮತ್ತು ಸ್ವಯಂಸೇವಕರನ್ನ ಭೇಟಿಯಾಗುತ್ತಿದ್ದಾರೆ. ಕಾರ್ಯಕ್ರಮಕ್ಕೆ ನಿಗದಿಯಾಗಿರವ ಸ್ಥಳದಲ್ಲಿ ನಟನ ಬ್ಯಾನರ್‌, ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಇದಕ್ಕೂ ಮುನ್ನ ಅಕ್ಟೋಬರ್ 14 ರಂದು ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಅಭಿಮಾನಿ ಸಂಘದ ಹೆಸರನ್ನ ಬದಲಾಯಿಸುವ ನಿರ್ಧಾರಕ್ಕೆ ಅಧಿಕೃತ ಒಪ್ಪಿಗೆ ನೀಡಲಾಗಿತ್ತು. ಈ ಸಂಘಟನೆಯು ಹೊಸ ಲಾಂಛನವನ್ನೂ ಅನಾವರಣಗೊಳಿಸಿದ್ದು, ಇದರಲ್ಲಿ ಧನುಷ್ ಕೈಮುಗಿದು ನಿಂತಿರುವ ಚಿತ್ರವಿದೆ. ಈ ಚಿತ್ರದ ಸುತ್ತಲೂ ಕೆಂಪು ಬಣ್ಣದ ನಕ್ಷತ್ರ ಹಾಗೂ ಕೆಂಪು ಮತ್ತು ಬಿಳಿ ಬಣ್ಣದ ವೃತ್ತಾಕಾರದ ಗಡಿರೇಖೆಯಿದೆ.

ತಮಿಳುನಾಡಿನಲ್ಲಿ ‘ಆಪರೇಷನ್ ಡಿ’ – ಕಾಂಗ್ರೆಸ್
ಈ ಬೆಳವಣಿಗೆ ಕುರಿತು ತಮಿಳುನಾಡು ಕಾಂಗ್ರೆಸ್ (Congress) ಮುಖ್ಯಸ್ಥ ಮತ್ತು ಸಂಸದ ಮಾಣಿಕಂ ಟ್ಯಾಗೋರ್ ಪ್ರತಿಕ್ರಿಯಿಸಿದ್ದು, ಇದನ್ನು ʻಬಿಜೆಪಿಯ ಆಪರೇಷನ್‌ ಡಿʼ ಎಂದು ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಚಲನಚಿತ್ರ ವ್ಯಕ್ತಿಗಳನ್ನ ಮತ್ತು ಹೊಸ ರಾಜಕೀಯ ಸಂಘಟನೆಗಳನ್ನು ಉತ್ತೇಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ದಕ್ಷಿಣದ ಈ ರಾಜ್ಯದಲ್ಲಿ ‘ಆಪರೇಷನ್ ಡಿ’ (Operation D) ನಡೆಯುತ್ತಿದೆ ಎಂದು ಧನುಷ್‌ ಹೆಸರು ಹೇಳದೇ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ತಮಿಳುನಾಡಿನಲ್ಲಿ ‘ಆಪರೇಷನ್ ಡಿ’ ಆರಂಭವಾಗಿದೆ… ಅವರು (ಬಿಜೆಪಿ) ಚಲನಚಿತ್ರ ತಾರೆಯೊಬ್ಬರನ್ನ ತಮ್ಮ ಮುಖವಾಗಿ ಬಳಸಿಕೊಳ್ಳಲು ಬಯಸುತ್ತಿದ್ದಾರೆ. ಅವರು ಈಗಾಗಲೇ ಎಐಎಡಿಎಂಕೆ (AIADMK) ಪಕ್ಷವನ್ನು ಮುಗಿಸಿದ್ದಾರೆ. ರಜನಿಕಾಂತ್ ಅವರ ಮೂಲಕ ಪಕ್ಷವೊಂದನ್ನು ಆರಂಭಿಸಲು ಪ್ರಯತ್ನಿಸಿದ್ದರು. ಈಗ ಅಣ್ಣಾಮಲೈ ಅವರನ್ನ ಬಳಸಿಕೊಂಡು ಹೊಸ ಸಂಘಟನೆ ರಚಿಸಿದ್ದಾರೆ. ಇವೆಲ್ಲವೂ ಒಂದೇ ಸಿದ್ಧಾಂತದ ಕಡೆಗೆ ವಾಲಿಕೊಂಡಿವೆ, ಅದೆಂದರೆ ಅಮಿತ್ ಶಾ ಅವರ ಸಿದ್ಧಾಂತ ಎಂದು ಆಕ್ಷೇಪಿಸಿದ್ದಾರೆ.

Share This Article
Exit mobile version