ಇರಾನ್‌ ಮೇಲೆ ‘ಮದರ್‌ ಆಫ್‌ ಆಲ್‌ ಬಾಂಬ್ಸ್‌’ ಹಾಕಲು ಅಮೆರಿಕ ರೆಡಿ! – ಏನಿದು ಶಸ್ತ್ರಾಸ್ತ್ರ, ಎಷ್ಟು ಅಪಾಯಕಾರಿ?

7 Min Read

ಅಮೆರಿಕ-ಇಸ್ರೇಲ್ ಮತ್ತು ಇರಾನ್ (Iran) ನಡುವಿನ ಯುದ್ಧ ಬೂದಿ ಮುಚ್ಚಿದ ಕೆಂಡದಂತಿದೆ. ರಣಭೀಕರ ದಾಳಿ ನಡೆಸಿ ಯುದ್ಧಕ್ಕೆ ಅಂತ್ಯ ಹಾಡಲು ಎದುರಾಳಿಗಳು ಹವಣಿಸುತ್ತಿದ್ದಾರೆ. ತಮ್ಮ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರಗಳನ್ನು ಪರಸ್ಪರರ ಮೇಲೆ ಪ್ರಯೋಗಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಮೆರಿಕದ ‘ಮದರ್ ಆಫ್ ಆಲ್ ಬಾಂಬ್ಸ್’ (ಎಲ್ಲಾ ಬಾಂಬ್‌ಗಳ ತಾಯಿ) ಮತ್ತು ಇರಾನ್ ಇತ್ತೀಚೆಗೆ ಘೋಷಿಸಿದ ‘ಫಾದರ್ ಆಲ್ ಬಾಂಬ್ಸ್” (ಎಲ್ಲಾ ಬಾಂಬ್‌ಗಳ ತಂದೆ) ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿ ನಿಂತಿವೆ. ಈ ಹೆಸರುಗಳನ್ನು ಕೇಳಿದರೆ, ಇವು ಯಾವುದೋ ಸೇನಾ ಬಲ ಪ್ರದರ್ಶನದ ಸ್ಪರ್ಧೆಗೆ ಸೇರಿದವುಗಳಂತೆ ಭಾಸವಾಗುತ್ತವೆ. ಆದರೆ, ಇಂತಹ ಹೆಸರುಗಳ ಹಿಂದೆ ಹೆಚ್ಚು ಗಂಭೀರವಾದ ಪ್ರಶ್ನೆಯೊಂದಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಮತ್ತೊಮ್ಮೆ ದಾಳಿ ನಡೆಸಲು ನಿರ್ಧರಿಸಿದರೆ ಏನಾಗುತ್ತದೆ? ಇರಾನ್‌ನ ಪ್ರತಿದಾಳಿ ಎಷ್ಟು ತೀವ್ರವಾಗಿರಬಹುದು ಎಂಬ ಆತಂಕಕಾರಿ ಪ್ರಶ್ನೆಗಳು ಮೂಡುವುದು ಸಹಜ.

ಅಮೆರಿಕದ (America) ಮಧ್ಯಂತರ ಚುನಾವಣೆಗಳ ನಂತರ ಹೊಸ ಕಾರ್ಯಾಚರಣೆಯೊಂದಕ್ಕೆ ಅಮೆರಿಕ ಮತ್ತು ಇಸ್ರೇಲ್ ಯೋಜನೆಗಳನ್ನು ರೂಪಿಸುತ್ತಿವೆ ಎಂಬ ವಿಚಾರ ಮತ್ತೊಂದು ಸುತ್ತಿನ ದಾಳಿಗಳ ಸಾಧ್ಯತೆಯನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಇರಾನ್‌ನ ಪರಮಾಣು ಸೌಲಭ್ಯಗಳು ಮತ್ತು ಕ್ಷಿಪಣಿ ಶಸ್ತ್ರಾಗಾರಗಳಿಂದ ಹಿಡಿದು ಅದರ ಇಂಧನ ಮೂಲಸೌಕರ್ಯಗಳವರೆಗೆ ವಿವಿಧ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ. ಇದರಲ್ಲಿ, ಭೂಮಿಯ ಆಳದಲ್ಲಿ ಭದ್ರವಾಗಿ ಅಡಗಿರುವ ‘ಪಿಕ್‌ಆಕ್ಸ್ ಮೌಂಟೇನ್’ (Pickaxe Mountain) ತಾಣವು ಪ್ರಮುಖ ಟಾರ್ಗೆಟ್ ಆಗುವ ಸಾಧ್ಯತೆ ಇದೆ. ವಿಶಾಲ ಪ್ರದೇಶದಲ್ಲಿರುವ ಗುರಿಗಳನ್ನು ಸಂಪೂರ್ಣವಾಗಿ ನೆಲಸಮ ಮಾಡುವ ಸಾಮರ್ಥ್ಯವನ್ನು ಈ ಬೃಹತ್ ಬಾಂಬ್ ಹೊಂದಿದ್ದರೂ, ಇರಾನ್‌ನ ಪರಮಾಣು ಯೋಜನೆಯ ಕೇಂದ್ರಬಿಂದುವಾಗಿರುವ, ಅತ್ಯಂತ ಭದ್ರವಾದ ಭೂಗತ ಸೌಲಭ್ಯಗಳನ್ನು ಭೇದಿಸಲು ಇದು ಬಹುಶಃ ಸಾಕಾಗದಿರಬಹುದು. ಇತ್ತ, ಇರಾನ್ ತನ್ನ ಪಾಲಿಗೆ ಮತ್ತೊಂದು ದಾಳಿಯು ಕೇವಲ ಸೀಮಿತ ಮಿಲಿಟರಿ ಕಾರ್ಯಾಚರಣೆಯಾಗಿ ಉಳಿಯುವುದಿಲ್ಲ ಎಂದು ಹೇಳಿದೆ. ಇಂಧನ ಮೂಲಸೌಕರ್ಯ, ವಾಣಿಜ್ಯ ಹಡಗು ಸಾಗಣೆ ಮತ್ತು ಡೇಟಾ ಕೇಂದ್ರಗಳು, ನೀರೊಳಗಿನ ಇಂಟರ್ನೆಟ್ ಕೇಬಲ್‌ಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇದು ಯುದ್ಧಭೂಮಿಯನ್ನು ಮೀರಿದ ಪರಿಣಾಮಗಳನ್ನು ಬೀರುವ ಸಂಘರ್ಷದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಬಂದ ವಿಮಾನ ಹತ್ಕೊಂಡ್‌ ವಾಪಸ್‌ ಹೋಗಿ; ಟ್ರಂಪ್‌ ಸಂದೇಶ ತಂದಿದ್ದ ಪಾಕ್‌ ಸೇನಾ ಮುಖ್ಯಸ್ಥನಿಗೆ ಇರಾನ್‌ನಲ್ಲಿ ಮುಖಭಂಗ

ಫಾದರ್ ವರ್ಸಸ್ ಮದರ್ ಬಾಂಬ್
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಹೊಸೈನ್ ಮೊಹೆಬ್ಬಿ ಅವರು, ‘ಎಲ್ಲಾ ಬಾಂಬ್‌ಗಳ ತಂದೆ’ (Father of All Bombs) ಎಂಬ ಹೆಸರಿನ ಶಸ್ತ್ರಾಸ್ತ್ರವೊಂದನ್ನು ಪರಿಚಯಿಸಲು ನಮ್ಮ ದೇಶ ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇರಾನ್ ವಿರುದ್ಧದ ದಾಳಿಗೆ ಅಮೆರಿಕವು ತನ್ನ ‘GBU-43/B ಮ್ಯಾಸಿವ್ ಆರ್ಡನೆನ್ಸ್ ಏರ್ ಬ್ಲಾಸ್ಟ್’ ಅಂದ್ರೆ, ‘ಎಲ್ಲಾ ಬಾಂಬುಗಳ ತಾಯಿ’ (Mother of All Bombs) ಅನ್ನು ಬಳಸುವ ಬಗ್ಗೆ ಪರಿಗಣಿಸುತ್ತಿದೆ ಎಂಬ ವರದಿಗಳ ನಡುವೆಯೇ ಇರಾನ್‌ನಿಂದ ಈ ಘೋಷಣೆ ಹೊರಬಿದ್ದಿದೆ. ಆದರೆ, ಇರಾನ್ ತಾನು ಹೇಳಿದ ಶಸ್ತ್ರಾಸ್ತ್ರದ ತಾಂತ್ರಿಕ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಈ ಹೆಸರು ಬಾಂಬ್, ಕ್ಷಿಪಣಿ ಅಥವಾ ಇನ್ನಾವುದೇ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸೂಚಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹೋಲಿಕೆಯ ಕೇಂದ್ರದಲ್ಲಿರುವ ಅಮೆರಿಕದ ಶಸ್ತ್ರಾಸ್ತ್ರವೆಂದರೆ, GBU-43/B MOAB. ಇದು ಸುಮಾರು 9,800 ಕೆಜಿ (ಅಥವಾ 21,600 ಪೌಂಡ್) ತೂಕವಿರುವ, ಪರಮಾಣು ರಹಿತವಾದ ಬೃಹತ್ ಸಾಂಪ್ರದಾಯಿಕ ಬಾಂಬ್ ಆಗಿದೆ.

GBU-43/B MOAB ಅನ್ನು ಮೊದಲ ಬಾರಿಗೆ 2017ರಲ್ಲಿ ಅಫ್ಘಾನಿಸ್ತಾನದಲ್ಲಿ, ‘ಇಸ್ಲಾಮಿಕ್ ಸ್ಟೇಟ್’ ಸಂಘಟನೆಗೆ ಸಂಬಂಧಿಸಿದ ಸುರಂಗ ಸಂಕೀರ್ಣವೊಂದರ ವಿರುದ್ಧ ಅಮೆರಿಕದ ಸೇನೆಯು ಯುದ್ಧದಲ್ಲಿ ಬಳಸಿತ್ತು. ಇದರಲ್ಲಿರುವ ಅಪಾರ ಪ್ರಮಾಣದ ಸ್ಫೋಟಕ ಸಾಮರ್ಥ್ಯವು ಇದನ್ನು ಅತ್ಯಂತ ಪ್ರಬಲ ಆಯುಧವನ್ನಾಗಿ ಮಾಡಿದೆ. ಆದರೆ, ಇದಕ್ಕೆ ಇಡಲಾಗಿರುವ ಅಡ್ಡಹೆಸರನ್ನು ಕಂಡು, ಇದರಲ್ಲಿ ಪರಮಾಣು ಸಾಮರ್ಥ್ಯವಿದೆ ಎಂದು ತಪ್ಪಾಗಿ ಭಾವಿಸಬಾರದು. ಇರಾನ್‌ನ ಇಂಧನ ಮೂಲಸೌಕರ್ಯಗಳು ಮತ್ತು ಪರಮಾಣು ಸಂಬಂಧಿತ ಸೌಲಭ್ಯಗಳಂತಹ ಗುರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳ ಭಾಗವಾಗಿ, ಅಮೆರಿಕದ ಮಿಲಿಟರಿ ಯೋಜಕರು ‘MOAB’ (ಮೋಬ್) ಅನ್ನು ಬಳಸುವ ಬಗ್ಗೆ ಯೋಜಿಸಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ, ಭೂಮಿಯ ಆಳದಲ್ಲಿರುವ ‘ಪಿಕ್‌ಆಕ್ಸ್ ಮೌಂಟೇನ್’ (Pickaxe Mountain) ಎಂಬ ತಾಣದ ಮೇಲೆ ದಾಳಿ ನಡೆಸುವ ಸಾಧ್ಯತೆಯ ಬಗ್ಗೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚರ್ಚಿಸಿದ್ದಾರೆ.

‘ಎಲ್ಲಾ ಬಾಂಬ್‌ಗಳ ತಾಯಿ’ ವಿಶೇಷತೆ ಏನು?
GBU-43/B MOAB ಅನ್ನೋದು ಯುನೈಟೆಡ್ ಸ್ಟೇಟ್ಸ್ ಅಭಿವೃದ್ಧಿಪಡಿಸಿದ ಅತ್ಯಂತ ಶಕ್ತಿಶಾಲಿ ಪರಮಾಣು ರಹಿತ ಬಾಂಬ್‌ಗಳಲ್ಲಿ ಒಂದಾಗಿದೆ. ಸುಮಾರು 10,000 ಕೆಜಿ ತೂಕವಿರುವ ಈ ಶಸ್ತ್ರಾಸ್ತ್ರವನ್ನು ಪ್ರಬಲ ಸ್ಫೋಟದೊಂದಿಗೆ ದೊಡ್ಡ ಮಿಲಿಟರಿ ಗುರಿಗಳನ್ನು ನಾಶಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ಸುಮಾರು 9.1 ಮೀಟರ್ ಉದ್ದವಿರುತ್ತದೆ ಮತ್ತು ಸುಮಾರು 8,480 ಕೆಜಿಯಷ್ಟು ಸ್ಫೋಟಕಗಳನ್ನು ಹೊಂದಿರುತ್ತದೆ. ಈ ಬಾಂಬ್ ಸುಮಾರು 11 ಟನ್ ಟಿಎನ್‌ಟಿಗೆ ಸಮಾನವಾದ ಸ್ಫೋಟವನ್ನು ಉತ್ಪಾದಿಸುತ್ತದೆ. ಶತ್ರು ಸ್ಥಾನಗಳು, ಮಿಲಿಟರಿ ಉಪಕರಣಗಳು ಮತ್ತು ಪ್ರತಿಕೂಲ ಪಡೆಗಳನ್ನು ಹೊಂದಿರುವ ದೊಡ್ಡ ಪ್ರದೇಶಗಳನ್ನು ಗುರಿಯಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಅದರ ಅಗಾಧ ಗಾತ್ರ ಮತ್ತು ವಿನಾಶಕಾರಿ ಶಕ್ತಿಯಿಂದಾಗಿ ಇದು ‘ಎಲ್ಲಾ ಬಾಂಬ್‌ಗಳ ತಾಯಿ’ ಎಂದು ಜನಪ್ರಿಯವಾಗಿದೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಅಮೆರಿಕದ ನೀರೊಳಗಿನ ದೈತ್ಯ ಡ್ರೋನ್‌ ವಶಕ್ಕೆ ಪಡೆದ ಇರಾನ್‌ – ಇಲ್ವೇ ಇಲ್ಲ ಅಂತಿದೆ ಯುಎಸ್‌

ಭೂಮಿಯ ಆಳದಲ್ಲಿರುವ ಟಾರ್ಗೆಟ್‌ಗಳನ್ನೂ ಭೇದಿಸಲು ವಿನ್ಯಾಸಗೊಳಿಸಲಾದ ಸಾಂಪ್ರದಾಯಿಕ ಬಂಕರ್-ಬಸ್ಟರ್‌ಗಿಂತ ಭಿನ್ನವಾಗಿ, MOAB ಒಂದು ವಾಯು-ಸ್ಫೋಟಕ ಶಸ್ತ್ರಾಸ್ತ್ರವಾಗಿದೆ. ಅದು ನೆಲದ ಮೇಲೆ ಸ್ಫೋಟಗೊಳ್ಳುತ್ತದೆ. ವಿಶಾಲ ಪ್ರದೇಶದಾದ್ಯಂತ ಗುರಿಗಳನ್ನು ನಾಶಮಾಡುವ ಸಾಮರ್ಥ್ಯವಿರುವ ಬೃಹತ್ ಸ್ಫೋಟವನ್ನು ಉತ್ಪಾದಿಸುತ್ತದೆ. ಜಿಪಿಎಸ್ (GPS) ನಿರ್ದೇಶಿತ ಈ ಬಾಂಬ್ ಸರಿಸುಮಾರು ಒಂಬತ್ತು ನಗರ ಬ್ಲಾಕ್‌ಗಳಷ್ಟು ವಿಸ್ತೀರ್ಣದ ಪ್ರದೇಶವನ್ನು ನಾಶಪಡಿಸಬಲ್ಲದು. ಇದನ್ನು ಇರಾಕ್ ಯುದ್ಧದ ಸಮಯದಲ್ಲಿ ಅಭಿವೃದ್ಧಿಪಡಿಸಲಾಯಿತು. ಅಮೆರಿಕದ ಅಗಾಧವಾದ ಶಸ್ತ್ರಬಲವನ್ನು ಪ್ರದರ್ಶಿಸುವ ಮೂಲಕ, ಶತ್ರು ಪಡೆಗಳ ಮೇಲೆ ಮಾನಸಿಕ ಪರಿಣಾಮ ಬೀರಬಲ್ಲ ಆಯುಧವನ್ನಾಗಿ ರೂಪಿಸುವುದು ಇದರ ಹಿಂದಿದ್ದ ಉದ್ದೇಶಗಳಲ್ಲಿ ಒಂದಾಗಿತ್ತು.

ಇರಾನ್‌ನ ಭೂಗತ ಪರಮಾಣು ತಾಣಗಳನ್ನು ನಾಶ ಮಾಡಬಲ್ಲದೇ?
ನೆಲದ ಮೇಲ್ಮೈಯಲ್ಲಿ ಬಾಂಬ್ ಹೊಂದಿರುವ ವಿನಾಶಕಾರಿ ಶಕ್ತಿಯು, ಭೂಮಿಯ ಆಳದವರೆಗೆ ನುಗ್ಗಿ ಹೋಗುವ ಸಾಮರ್ಥ್ಯವನ್ನೇ ಹೊಂದಿರುತ್ತದೆ ಎಂದು ಹೇಳಲಾಗುವುದಿಲ್ಲ. ಗ್ರಾನೈಟ್‌ನ ದಪ್ಪ ಪದರಗಳು ಮತ್ತು ಇತರ ಭದ್ರಕೋಟೆಗಳಿಂದ ರಕ್ಷಿಸಲ್ಪಟ್ಟಿರುವ ಸೌಲಭ್ಯಗಳನ್ನು ನಾಶಪಡಿಸಲು ಈ ಬಾಂಬ್‌ಗೆ ಅಸಾಧ್ಯವಾಗಬಹುದು. ಭೂಮಿಯ ಆಳಕ್ಕೆ ನುಗ್ಗಿ ಹೋಗುವುದಕ್ಕಿಂತ ಹೆಚ್ಚಾಗಿ, ವಿಶಾಲವಾದ ಮೇಲ್ಮೈ ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಸಾಮರ್ಥ್ಯವೇ ಇದರ ಪ್ರಮುಖ ಶಕ್ತಿಯಾಗಿದೆ. ಈ ಶಸ್ತ್ರಾಸ್ತ್ರವನ್ನು ಇರಾನ್‌ನ ಪರಮಾಣು ಸೌಲಭ್ಯಗಳ ವಿರುದ್ಧ ಬಳಸುವುದರಿಂದ, ಅಮೆರಿಕ ನಿರೀಕ್ಷಿಸುತ್ತಿರುವ ಮಿಲಿಟರಿ ರಿಸಲ್ಟ್ ಸಿಗುತ್ತವೆಯೇ ಎಂಬುದಕ್ಕೆ ಯಾವುದೇ ಸ್ಪಷ್ಟ ಉತ್ತರವಿಲ್ಲ.

ಹೊಸ ದಾಳಿಗೆ ಯುಎಸ್-ಇಸ್ರೇಲ್ ಸಿದ್ಧತೆ ಯಾಕೆ?
ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಮತ್ತೆ ದಾಳಿಗಳನ್ನು ನಡೆಸಲು ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಯೋಜನೆಗಳನ್ನು ರೂಪಿಸಿವೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. ಈ ಸಿದ್ಧತೆಗಳ ಭಾಗವಾಗಿ ಇರಾಕ್‌ನ ವಾಯುಪ್ರದೇಶದಲ್ಲಿ ದಾಳಿ ತಂತ್ರಗಳನ್ನು ಅಭ್ಯಾಸ ಮಾಡುವ ಕಸರತ್ತುಗಳು ನಡೆದಿವೆ ಎಂದು ವರದಿಯಾಗಿದೆ. ಇದೇ ವೇಳೆ, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಅವರು ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದರು. ಅಮೆರಿಕದ ಟಾರ್ಗೆಟ್‌ಗಳಲ್ಲಿ ಇರಾನ್‌ನ ಇಂಧನ ಮೂಲಸೌಕರ್ಯ, ಪರಮಾಣು ಸೌಲಭ್ಯಗಳು ಮತ್ತು ಕ್ಷಿಪಣಿ ಹಾಗೂ ಡ್ರೋನ್ ಶಸ್ತ್ರಾಗಾರ ಸೇರಿವೆ. ಅಮೆರಿಕ ಮತ್ತು ಇಸ್ರೇಲ್‌ನ ಹಿಂದಿನ ಕಾರ್ಯಾಚರಣೆಗಳು ಜಾಗತಿಕ ಇಂಧನ ಬೆಲೆಗಳನ್ನು ಏರಿಸಿದವು. ಹಣದುಬ್ಬರದ ಒತ್ತಡಕ್ಕೆ ಕಾರಣವಾದವು. ಕ್ಷಿಪಣಿ ಪ್ರತಿಬಂಧಕಗಳ (Missile Interceptors) ಪೂರೈಕೆಯ ಮೇಲೆ ಒತ್ತಡವನ್ನು ಉಂಟುಮಾಡಿದವು. ಇಂತಹ ಮಿಲಿಟರಿ ಒತ್ತಡದ ಹೊರತಾಗಿಯೂ, ತನ್ನ ಪರಮಾಣು ಕಾರ್ಯಕ್ರಮದ ವಿಷಯದಲ್ಲಿ ಅಮೆರಿಕದ ಷರತ್ತುಗಳಿಗೆ ಇರಾನ್ ಒಪ್ಪಿಲ್ಲ. ಇದನ್ನೂ ಓದಿ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್‌ – ಮಧ್ಯಂತರ ಚುನಾವಣೆ ಬಳಿಕ ಮತ್ತೆ ಬಾಂಬ್‌ ದಾಳಿ?

ಟ್ರಂಪ್ ಅವರು ಪ್ರಮುಖ ಹೊಸ ಯುದ್ಧ ಕಾರ್ಯಾಚರಣೆಗಳಿಗೆ ಅನುಮೋದನೆ ನೀಡುವುದರಿಂದ ಸದ್ಯಕ್ಕೆ ದೂರ ಉಳಿದಿದ್ದಾರೆ. ಅಧ್ಯಕ್ಷರು ತಮ್ಮ ಮುಂದಿರುವ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಅಸ್ತಿತ್ವದಲ್ಲಿ ಇರಬಹುದು ಅಥವಾ ಇಲ್ಲದಿರಬಹುದು, ಅಂತಹ ಮಿಲಿಟರಿ ಯೋಜನೆಗಳ ಕುರಿತು ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇರಾನ್ ಹೇಗೆ ಪ್ರತೀಕಾರ ತೀರಿಸಿಕೊಳ್ಳಬಹುದು?
ಮತ್ತೆ ಆರಂಭವಾಗುವ ಕಾರ್ಯಾಚರಣೆಯು ಕೇವಲ ತಕ್ಷಣದ ಯುದ್ಧಭೂಮಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಇರಾನ್ ಕೂಡ ಎಚ್ಚರಿಸಿದೆ. ತನ್ನ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ, ಅರಾಮ್ಕೊ (Aramco) ತಾಣಗಳು ಸೇರಿದಂತೆ ಸೌದಿ ಅರೇಬಿಯಾದ ಇಂಧನ ಸೌಲಭ್ಯಗಳ ಮೇಲೆ ಪ್ರತಿದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಸಂಘರ್ಷವು ಈಗಾಗಲೇ ಪ್ರಾದೇಶಿಕ ಭದ್ರತೆ ಮತ್ತು ತೈಲ ಪೂರೈಕೆಗೆ ಅಡ್ಡಿಪಡಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುದ್ಧ ಉಲ್ಬಣಿಸಿದರೆ, ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಒತ್ತಡ ಹೆಚ್ಚಾಗಬಹುದು.

ಹಾರ್ಮುಜ್ ಜಲಸಂಧಿಯು ಮತ್ತೊಂದು ನಿರ್ಣಾಯಕ ವಿವಾದಿತ ಸ್ಥಳವಾಗಿದೆ. ಈ ಕಾರ್ಯತಂತ್ರದ ಜಲಮಾರ್ಗದ ಮೂಲಕ ಸಾಗಣೆಗೆ ಯಾವುದೇ ರೀತಿಯ ಅಡಚಣೆ ಉಂಟಾದರೆ ಅದು ಅಂತರರಾಷ್ಟ್ರೀಯ ಇಂಧನ ಹರಿವಿನ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮಗಳು ಮಧ್ಯಪ್ರಾಚ್ಯವನ್ನು ಮೀರಿ ದೂರದವರೆಗೆ ತಲುಪಬಹುದು. ಇನ್ನೊಂದು ಸುತ್ತಿನ ಕಾದಾಟವು ಶೀಘ್ರದಲ್ಲೇ ಮುಗಿಯಬಹುದು ಎಂಬ ಕಲ್ಪನೆಯನ್ನು ಇರಾನ್ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಹಿರಿಯ ಸಲಹೆಗಾರರೊಬ್ಬರು, ಸಂಘರ್ಷವು 72 ಗಂಟೆಗಳ ಒಳಗೆ ಕೊನೆಗೊಳ್ಳಬಹುದು ಎಂಬ ಸಾಧ್ಯತೆಯನ್ನು ಕೇವಲ ಕಲ್ಪನೆ (ಫ್ಯಾಂಟಸಿ) ಎಂದಿದ್ದಾರೆ. ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ಇರಾನ್ ನಿರ್ಧರಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಸಂಕಷ್ಟದ ಸುಳಿಯಿಂದ ಹೊರಬರಲು ಬಯಸಿದ್ರೆ..: ಟ್ರಂಪ್‌ಗೆ 7 ಷರತ್ತು ವಿಧಿಸಿದ ಇರಾನ್‌

ಮತ್ತೊಂದು ಸುತ್ತಿನ ದಾಳಿ ಇರಾನ್ ಶರಣಾಗುವಂತೆ ಮಾಡುತ್ತಾ?
ತೀವ್ರ ಸ್ವರೂಪದ ಕಾರ್ಯಾಚರಣೆಯು ಇರಾನ್‌ನ ಆರ್ಥಿಕತೆಗೆ ಸಾಕಷ್ಟು ಹಾನಿಯುಂಟುಮಾಡಿ, ಅದು ಕೆಲವು ರಿಯಾಯಿತಿಗಳನ್ನು ನೀಡುವಂತೆ ಒತ್ತಾಯಿಸಬಹುದು ಎಂದು ಕೆಲವು ಅಧಿಕಾರಿಗಳು ಭಾವಿಸಿದ್ದಾರೆ. ಆದರೆ, ಈ ಹಿಂದಿನ ದಾಳಿಗಳು, ನಿರ್ಬಂಧಗಳು ಮತ್ತು ನೌಕಾಯಾನದ ಮೇಲಿನ ಒತ್ತಡಗಳು ವಿವಾದವನ್ನು ಬಗೆಹರಿಸಲು ವಿಫಲವಾಗಿರುವುದರಿಂದ, ಮತ್ತಷ್ಟು ದಾಳಿಗಳು ಅರ್ಥಪೂರ್ಣ ರಾಜತಾಂತ್ರಿಕ ಪರಿಹಾರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ತೀರ ಕಡಿಮೆ ಎಂದಿದ್ದಾರೆ.

Share This Article
Exit mobile version