Friday, 13th December 2019

Recent News

2 ಸಾವಿರ ರೂ. ಉದಾಹರಣೆ ನೀಡಿ ಐಸಿಸಿಯನ್ನು ಟ್ರೋಲ್‍ಗೈದ ಬಿಗ್ ಬಿ

ನವದೆಹಲಿ: 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಲು ಕಾರಣವಾದ ಐಸಿಸಿಯ ಬೌಂಡರಿ ಮಾನದಂಡದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೂಡ ಟ್ವೀಟ್ ಮೂಲಕ ಐಸಿಸಿ ನಿಯಮವನ್ನು ಟೀಕಿಸಿ ಟ್ರೋಲ್ ಮಾಡಿದ್ದಾರೆ.

ನಿಮ್ಮ ಬಳಿ 2,000 ರೂ. ನೋಟು ಇದೆ. ನನ್ನ ಹತ್ತಿರವೂ 2,000 ರೂ. ಇದೆ. ಆದರೆ ನಿಮ್ಮ ಬಳಿ 2,000 ಮುಖಬೆಲೆಯ ಒಂದೇ ನೋಟು ಇದ್ದರೆ ನನ್ನ ಹತ್ತಿರ 500 ರೂ. ಮುಖಬೆಲೆಯ 4 ನೋಟುಗಳಿವೆ. ಹಾಗಾದರೆ ಇಬ್ಬರಲ್ಲಿ ಯಾರು ಶ್ರೀಮಂತರು ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಓವರ್ ಥ್ರೋಗೆ 6 ರನ್ ನೀಡಿದ್ದು ತಪ್ಪು – ಮಾಜಿ ಅಂಪೈರ್ ಸೈಮನ್ ಟಫೆಲ್

ಅದೇ ಟ್ವೀಟ್‍ನಲ್ಲಿ ಉತ್ತರ ನೀಡಿರುವ ಬಿಗ್ ಬಿ, ಐಸಿಸಿ ನಿಯಮ ಪ್ರಕಾರ ಯಾರು 500ರ ನಾಲ್ಕು ನೋಟು ಹೊಂದಿರುತ್ತಾರೋ ಅವರೇ ಶ್ರೀಮಂತರು ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲದೆ ನಗುವ ಎಮೋಜಿ ಹಾಕಿ ಐಸಿಸಿ ರೂಲ್ಸ್ ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಐಸಿಸಿ ನಿಯಮಗಳ ಪ್ರಕಾರ ನ್ಯೂಜಿಲೆಂಡ್ ಚಾಂಪಿಯನ್!

ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಜನಕರಿಗೆ ವಿಶ್ವಕಪ್ ಕಿರೀಟ ಒಲಿದಿದೆ. ಆದರೆ ಫೈನಲ್‍ನಲ್ಲಿ ಇಂಗ್ಲೆಂಡ್‍ಗೆ ಗೆಲುವು ನೀಡಿದ ಐಸಿಸಿ ನಿಯಮದ ವಿರುದ್ಧ ವಿಶ್ವದಾದ್ಯಂತ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ಟೈ ಆದರೂ ಇಂಗ್ಲೆಂಡ್‍ಗೆ ಹೆಚ್ಚು ಬೌಂಡರಿಗಳ ಆಧಾರ ಮೇಲೆ ಗೆಲುವು ನೀಡಿದ ಐಸಿಸಿ ಈ ನಿಯಮವನ್ನು ಕಟುವಾಗಿ ಟೀಕಿಸಿರುವ ನೆಟ್ಟಿಗರು, ಪಂದ್ಯದಲ್ಲಿ ಬೌಂಡರಿಗಳ ಸಂಖ್ಯೆಯೂ ಒಂದೇ ಆಗಿದ್ದರೆ ಆಟಗಾರರ 10 ಮತ್ತು 12 ನೇ ತರಗತಿಯ ಅಂಕ ನೋಡಿ ವಿಶ್ವಕಪ್ ವಿನ್ನರ್ ತೀರ್ಮಾನ ಮಾಡುತ್ತಿದ್ದರು ಎಂದು ಐಸಿಸಿಯನ್ನು ಕಾಲೆಳದಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಾಲಿವುಡ್ ನಟ ಪರೇಶ್ ರಾವಲ್ ಐಸಿಸಿ ವಿರುದ್ಧ ಕಿಡಿಕಾರಿದ್ದು, ಧೋನಿ ಅವರ ಸೇನಾ ಚಿಹ್ನೆ ಇರುವ ಗ್ಲೋವ್ಸ್ ಬದಲಿಸಲು ಆಸಕ್ತಿ ತೋರಿಸುವ ಐಸಿಸಿ ತನ್ನ ಮೂರ್ಖ ಸೂಪರ್ ಓವರ್ ನಿಯಮಗಳನ್ನು ಬದಲಿಸಲಿ ಎಂದು ಸೋಮವಾರ ಟ್ವೀಟ್ ಮಾಡಿದ್ದರು.

ಇಂಗ್ಲೆಂಡ್‍ನಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಐಸಿಸಿ ನಿಯಮಗಳು ಇಂಗ್ಲೆಂಡ್ ಪರವಾಗಿ ಇದೆ. ಈ ನಿಯಮದ ಪ್ರಕಾರ ಇಂಗ್ಲೆಂಡ್ ವಿನ್ ಆಗಿದೆ. ಆದರೆ ಇಂಗ್ಲೆಂಡ್ ವಿಶ್ವಕಪ್ ನಲ್ಲಿ ಜಯಗಳಿಸಿದ ರೀತಿಯಲ್ಲಿ ಹೊರದೇಶದಲ್ಲಿ ಜಯಸಾಧಿಸಲು ಸಾಧ್ಯವಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಹಲವಾರು ನೆಟ್ಟಿಗರು ನಿಜವಾದ ವಿನ್ನರ್ ನ್ಯೂಜಿಲೆಂಡ್ ಎಂದು ಟ್ವೀಟ್ ಮಾಡಿದ್ದಾರೆ.

ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಮಾನ ಅಂಕ ಬಂದಿದ್ದರೂ ಓರ್ವ ವಿದ್ಯಾರ್ಥಿ ಪ್ರಥಮ ಎಂದು ಘೋಷಿಸಲಾಯಿತು. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ನಾಲ್ಕು ಅಂಕದ ಪ್ರಶ್ನೆಗೆ ಜಾಸ್ತಿ ಉತ್ತರ ಬರೆದಿದ್ದರೆ ಇನ್ನೊಬ್ಬ ಎರಡು ಅಂಕದ ಪ್ರಶ್ನೆಗೆ ಉತ್ತರ ಬರೆದಿದ್ದ. ಈ ರೀತಿಯಾಗಿ ಇಂಗ್ಲೆಂಡ್ ಈ ಬಾರಿ ಟ್ರೋಫಿ ಗೆದ್ದುಕೊಂಡಿದೆ ಎಂದು ಜನ ಕಾಲೆಳೆದಿದ್ದಾರೆ.

ವಿಶ್ವಕಪ್ ರೀತಿಯ ದೊಡ್ಡ ಪಂದ್ಯಗಳಲ್ಲಿ ಈ ರೀತಿಯ ನಿಯಮವನ್ನು ಐಸಿಸಿ ಅಳವಡಿಸಿರುವುದು ಸರಿಯಲ್ಲ. ಇನ್ನೂ ಮುಂದೆ ಎದುರಾಳಿ ನೀಡಿದ ಮೊತ್ತವನ್ನು ಬೆನ್ನಟ್ಟಿದರೂ ಹೆಚ್ಚು ಬೌಂಡರಿ ಹೊಡೆದಿಲ್ಲ ಎಂದು ಹೇಳಿ ಎದುರಾಳಿ ತಂಡಕ್ಕೆ ಜಯವನ್ನು ನೀಡುವ ನಿಯಮ ಬಂದರೂ ಬರಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

46 ದಿನಗಳಲ್ಲಿ 48 ಪಂದ್ಯಗಳನ್ನು ಆಡಿಸಿ ವಿಶ್ವಕಪ್‍ನಂತಹ ಟೂರ್ನಿಗಳಲ್ಲಿ ಫೈನಲ್ ವಿಜೇತರನ್ನು ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರೆ ಸೆನ್ಸ್ ಲೆಸ್ ನಿಯಮಗಳನ್ನು ಐಸಿಸಿ ಹೊಂದಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಭಾನುವಾರ ಲಾಡ್ರ್ಸ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್ ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಈ ಗುರಿಯನ್ನು ಬೆನ್ನಟ್ಟಲಾಗದೆ ಕೊನೆಯಲ್ಲಿ ಬೆನ್ ಸ್ಟೋಕ್ಸ್ ಅವರ ಸೂಪರ್ ಬ್ಯಾಟಿಂಗ್‍ಯಿಂದ ಪಂದ್ಯದಲ್ಲಿ ಟೈ ಸಾಧಿಸಿತ್ತು.

ಪಂದ್ಯ ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್ ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದ್ದರು.

ಆದರೆ ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಕೊನೆಯ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನ್ ಔಟ್ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಇಂಗ್ಲೆಂಡ್ ಒಟ್ಟು 24 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್ 17 ಬೌಂಡರಿ ಹೊಡೆದಿತ್ತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು.

Leave a Reply

Your email address will not be published. Required fields are marked *