Connect with us

Bengaluru City

ದಕ್ಷಿಣದಲ್ಲಿ ಕಿಡಿಹೊತ್ತಿಸಿದ ಅಮಿತ್ ಶಾ ಒಂದು ದೇಶ ಒಂದು ಭಾಷೆ ಹೇಳಿಕೆ

Published

on

– ಹಿಂದಿ ಹೇರಿಕೆಗೆ ದಕ್ಷಿಣ ಭಾರತದಲ್ಲಿ ಆಕ್ರೋಶ
– ಕನ್ನಡದಲ್ಲಿ ಬ್ಯಾಂಕ್ ಎಕ್ಸಾಂಗೆ ಪರಿಷ್ಕೃತ ಆದೇಶ

ನವದೆಹಲಿ: ಒನ್ ರ್‍ಯಾಂಕ್, ಒನ್ ಪೆನ್ಷನ್, ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ‘ಒನ್ ನೇಷನ್ ಒನ್ ಎಲೆಕ್ಷನ್ಗೆ’ ಪ್ರಸ್ತಾಪವಿಟ್ಟಿದೆ. ಇದರ ಬೆನ್ನಲ್ಲೇ ಇದೀಗ, ‘ಒಂದು ದೇಶ ಒಂದು ಭಾಷೆ’ಗೂ ಕೈಹಾಕಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

‘ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದಾರೆ. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು ‘ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದಾರೆ.

ಅಲ್ಲದೇ ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದಾರೆ.

ಕೇಂದ್ರ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದು, ಹಿಂದಿ ಹೇರಿಕೆಗೆ ಆಸ್ಪದ ಇಲ್ಲವೇ ಇಲ್ಲ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ‘ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆಗೆ. ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ’ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ‘ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿ ಅವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ’ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಅಮಿತ್ ಶಾ ಹೇಳಿಕೆಯನ್ನು ಟೀಕಿಸಿ ತಮಿಳುನಾಡಿನ ಸ್ಟಾಲಿನ್, ‘ಇದು ಇಂಡಿಯಾನಾ. ಹಿಂಡಿಯಾನ’ ಎಂದು ಪ್ರಶ್ನೆ ಮಾಡಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆ: ಇಂದು ಹಿಂದಿ ದಿವಸ್ ಆಚರಣೆಗೆ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸಿದೆ. ಈ ಕುರಿತು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಸೆ.16ಕ್ಕೆ ದೇಶಾದ್ಯಂತ ಬ್ಯಾಂಕಿಂಗ್ ಪರೀಕ್ಷೆಗಳು ನಡೆಯಲಿವೆ.