Saturday, 24th August 2019

ಮೋದಿ ಪ್ರಚಂಡ ಗೆಲುವಿನ ಹಿಂದಿನ ಶಕ್ತಿ ಅಮಿತ್ ಶಾಗೆ ಭರ್ಜರಿ ಗಿಫ್ಟ್

ನವದೆಹಲಿ: 2019 ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಗಲಿರುಳು ಶ್ರಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಕೇಂದ್ರದ ಕ್ಯಾಬಿನೆಟ್‍ನಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ.

ಚುನಾವಣಾ ರಣ ಕಣದಲ್ಲಿ ನಿರಂತರವಾಗಿ ದುಡಿದಿದ್ದ ಅಮಿತ್ ಶಾ ಅವರು, ಬಿಜೆಪಿ 2ನೇ ಬಾರಿಗೆ ಅಧಿಕಾರ ಗಳಿಸಲು ಪ್ರಮುಖ ಕಾರಣರಾಗಿದ್ದಾರೆ. ಪರಿಣಾಮ ಈ ಬಾರಿಯ ಸರ್ಕಾರದಲ್ಲಿ ಅವರಿಗೆ ಗೃಹ ಖಾತೆ ಲಭಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ.

ಅಮಿತ್ ಶಾ ಅವರು ಮೋದಿ ಗೆಲುವಿನ ಹಿಂದಿನ ಚಾಣಕ್ಯ ಎಂದೇ ಕರೆಯಿಸಿಕೊಂಡಿದ್ದು, ಚುನಾವಣಾ ಪ್ರಚಾರಕ್ಕಾಗಿ ಸುಮಾರು 1 ಲಕ್ಷ ಕಿಮೀ ಪ್ರಯಾಣವನ್ನು ನಡೆಸಿದ್ದರು. 54 ವರ್ಷದ ಶಾ ಅವರು ಮೋದಿ ಅವರು ದೇಶದ ಜನರಲ್ಲಿ ಹೊಂದಿರುವ ವರ್ಚಸ್ಸನ್ನು ಉತ್ತಮವಾಗಿ ಬಳಿಸಿಕೊಂಡಿದ್ದರು. ಅದರಲ್ಲೂ ಗೆಲುವಿನಲ್ಲಿ ಅವರು ಪ್ರಮುಖ ರಣತಂತ್ರ ರಚಿಸಿದ್ದರು. ಸುಮಾರು 1 ವರ್ಷದ ಹಿಂದೆಯೇ ರಚಿಸಿದ್ದ ಪ್ರಚಾರ ತಂತ್ರಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದರು.

ಬಿಜೆಪಿ ಅಧ್ಯಕ್ಷರ ಅವಧಿ 3 ವರ್ಷವಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾ ಅವಧಿಯನ್ನು ವಿಸ್ತರಿಸಲಾಗಿತ್ತು. ಈಗ ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಇತ್ತ ಗುಜರಾತ್‍ನ ಗಾಂಧಿನಗರದಿಂದ ಸ್ಪರ್ಧೆ ಮಾಡಿದ್ದ ಅಮಿತ್ ಶಾ ಅವರು 5 ಲಕ್ಷ ಮತಗಳ ಅಂತರಗಳ ಗೆಲುವು ಪಡೆದಿದ್ದಾರೆ. ಆ ಮೂಲಕ ಇದೇ ಕ್ಷೇತ್ರದಲ್ಲಿ ಈ ಹಿಂದೆ ಸ್ಪರ್ಧೆ ನಡೆಸಿದ್ದ ಎಲ್‍ಕೆ ಆಡ್ವಾಣಿ ಅವರ (4.83 ಲಕ್ಷ ಮತ) ದಾಖಲೆಗಳನ್ನು ಮುರಿದಿದ್ದಾರೆ. ಅಮಿತ್ ಶಾ ಒಟ್ಟಾರೆ 8.74 ಲಕ್ಷ ಮತಗಳನ್ನು ಗಳಿಸಿದ್ದಾರೆ. ಇವರ ಪ್ರತಿ ಸ್ಪರ್ಧಿ ಚತುರ ಸಿನ್ಹಾ ಅವರು 3.30 ಲಕ್ಷ ಮತ ಪಡೆದಿದ್ದಾರೆ. 1989ರಿಂದಲೂ ಗಾಂಧಿ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 1996ರಲ್ಲಿ ವಾಜಪೇಯಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು.

Leave a Reply

Your email address will not be published. Required fields are marked *