Connect with us

Districts

ಏಪ್ರಿಲ್‌ನಲ್ಲಿ ಖಾಲಿ ಇರುವ ಎಲ್ಲ ಹುದ್ದೆ ಭರ್ತಿ: ಡಿಜಿಪಿ ಪ್ರವೀಣ್‌ ಸೂದ್‌

Published

on

ಕಾರವಾರ: ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಶೇ.100 ರಷ್ಟು ನೇಮಕಾತಿಯನ್ನು ಎಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಕಾರವಾರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಖಾಲಿ ಇರುವ ಇಲಾಖೆಯ ಎಲ್ಲಾ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಸಶಸ್ತ್ರ ಮೀಸಲು ಪಡೆಯ ಖಾಲಿ ಹುದ್ದೆಗೆ ಆರು ತಿಂಗಳಲ್ಲಿ ಭರ್ತಿಗೊಳಿಸಲಾಗುತ್ತದೆ ಎಂದರು.

ಪೊಲೀಸ್ ಇಲಾಖೆಗೆ ಕರಾವಳಿ ಭಾಗದಲ್ಲಿ ಭರ್ತಿಯಾಗುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಮೀನುಗಾರರ ಮಕ್ಕಳಿಗೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ. ಇಲಾಖೆಯಲ್ಲಿ ಎಎಸ್ಐ, ಹೆಡ್ ಕಾನ್ ಸ್ಟೇಬಲ್ ಗಳು ಅರ್ಹತೆ ಹೊಂದಿರುವ ಐದುವರ್ಷ ಪೂರೈಸಿರುವ ಎಲ್ಲರಿಗೂ ಭಡ್ತಿ ನೀಡಲಾಗುತ್ತಿದೆ. ಅರ್ಹತೆ ಇರುವ ಯಾವುದೇ ಸಿಬ್ಬಂದಿಯನ್ನು ಬಿಟ್ಟಿಲ್ಲ ಎಂದು ಹೇಳಿದರು.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಫ್‌) ಬೆಟಾಲಿಯನ್‌ ಅನ್ನು ಕಾರವಾರದಲ್ಲಿ ಪ್ರಾರಂಭಿಸಲು ತಂಡ ರಚನೆ ಮಾಡಲಾಗಿದ್ದು ಶೀಘ್ರವೇ ಪ್ರಾರಂಭವಾಗಲಿದೆ. ಹಂತಹಂತವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗುವುದು ಎಂದು ವಿವರಿಸಿದರು.

ಭಟ್ಕಳದಲ್ಲಿ ಪಾಕಿಸ್ತಾನದ ಮಹಿಳೆಯರು ಇಲ್ಲಿನ ಪುರುಷರನ್ನು ವಿವಾಹವಾಗಿ ಇಲ್ಲಿನ ಪೌರತ್ವ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡಲಾಗುತ್ತದೆ. ವಿದೇಶದಿಂದ ಪ್ರವಾಸಕ್ಕೆ ಬಂದ ವಿದೇಶಿಗರು ವೀಸಾ ಅವಧಿ ಮುಗಿದರೂ ಇಲ್ಲಿಯೇ ತಂಗುತ್ತಿದ್ದಾರೆ. ಇದು ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇಂತವರನ್ನು ನೇರವಾಗಿ ಡಿಟೆಕ್ಷನ್‌ ಸೆಂಟರ್‌ಗೆ ಕಳುಹಿಸಲಾಗುತ್ತಿದೆ. ನಂತರ ಆ ದೇಶದ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿ ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ ಎಂದರು.

ಗೋಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಪ್ರಕರಣ ದಾಖಲಿಸಲಾಗುತ್ತಿದೆ. ಇದರ ಜೊತೆಗೆ ಸೈಬರ್ ಕ್ರೈಂ ಕೂಡ ಹೆಚ್ಚಾಗಿದೆ. ಸೈಬರ್ ಕ್ರೈಂ ನಿಯಂತ್ರಣ ರಹಿತ ಅಪರಾಧವಾಗಿದೆ. ಇದನ್ನು ಪತ್ತೆಹಚ್ಚಲು ಕಷ್ಟವಾಗಿರುವ ಕಾರಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ರಸ್ತೆ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದೆ. ಹೀಗಾಗಿ ನಾವು ಅಂತಹ ಜಾಗವನ್ನು ಗುರುತಿಸಿ ಪಿಡಬ್ಲ್ಯೂಡಿ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಪ್ರವೀಣ್‌ ಸೂದ್‌ ತಿಳಿಸಿದರು.

Click to comment

Leave a Reply

Your email address will not be published. Required fields are marked *

www.publictv.in