– 10 ಲಕ್ಷ ಬೆಲೆ ಬಾಳುವ ಆಮೆ ಕಳ್ಳತನ
ಚೆನ್ನೈ: ಪಾರ್ಕ್‍ನಲ್ಲಿದ್ದ 10 ಲಕ್ಷ ರೂ. ಬೆಲೆ ಬಾಳುವ ವಿಶ್ವದ ಎರಡನೇ ಅತೀ ದೊಡ್ಡ ಆಲ್ಡಾಬ್ರಾ ಅಮೆಯನ್ನು ಕದಿಯುವ ಮೂಲಕ ಕಳ್ಳರು ಕೈಚಳಕ ತೋರಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರದ ಮೊಸಳೆ ಉದ್ಯಾನವನದಲ್ಲಿದ್ದ ಆಮೆ ಕಾಣೆಯಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 10 ಲಕ್ಷ ರೂ.ಗೂ ಅಧಿಕವಾಗಿದೆ. ಆರು ವಾರಗಳ ಹಿಂದೆ ಕ್ರೊಕೊಡೈನ್ ಬ್ಯಾಂಕ್ ಟ್ರಸ್ಟ್ ಸೆಂಟರ್ ಫಾರ್ ಹರ್ಪಿಟಾಲಜಿಯಲ್ಲಿ ಈ ಕಳ್ಳತನ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇದು ಪಾರ್ಕ್ ಒಳಗಿನವರ ಕೃತ್ಯವಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಉದ್ಯಾನವನದ ಸಿಬ್ಬಂದಿಯನ್ನು ಈ ಕುರಿತು ವಿಚಾರಣೆ ನಡೆಸಲಾಗಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಬೇಕಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಇನ್‍ಸ್ಪೆಕ್ಟರ್ ವೆಲ್ ಮುರುಗನ್ ಪ್ರತಿಕ್ರಿಯಿಸಿ, ನವೆಂಬರ್ 11 ಮತ್ತು 12ರ ಮಧ್ಯರಾತ್ರಿ ಕಳ್ಳತನ ನಡೆದಿರಬಹುದು. ಕಳ್ಳರು ಸುತ್ತಲಿನ ಯಾವುದೇ ಸಿಸಿ ಕ್ಯಾಮೆರಾಗಳಿಗೆ ಸಿಗದೇ ತಪ್ಪಿಸಿಕೊಂಡಿರುವುದನ್ನು ನೋಡಿದರೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.
ದೈತ್ಯ ಆಮೆ ಇದ್ದ ಆವರಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾ ಇರಲಿಲ್ಲ. ಆದರೆ ಮಧ್ಯರಾತ್ರಿ ಉದ್ಯಾನವನದ ಹೊರಗಡೆ ನಡೆದ ಚಟುವಟಿಕೆಯನ್ನು ನಾವು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ್ದೇವೆ. ಈಸ್ಟ್ ಕೋಸ್ಟ್ ರಸ್ತೆಯ ಮೂಲಕ ಕಳ್ಳರು ಪರಾರಿಯಾಗಿರಬಹುದು. ಈ ಬಗ್ಗೆ ನಾವು ಮಾಹಿತಿ ಕಲೆ ಹಾಕುತ್ತಿದ್ದೇವೆ. ಒಳಗಿರುವವರೇ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ ಪ್ರಕರಣ ಬೇಧಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇ.ಸುಂದರವಥನಂ ವಿವರಿಸಿದ್ದಾರೆ.
ಉದ್ಯಾನವನದಲ್ಲಿ ಹಲವು ಆಮೆ ಮತ್ತು ಮೊಸಳೆಗಳು ಸೇರಿದಂತೆ ನೂರಾರು ಸರೀಸೃಪಗಳ ಪೈಕಿ ನಾಲ್ಕು ಅಲ್ಡಾಬ್ರಾ ಆಮೆಗಳಲ್ಲಿ ಇದೀಗ ಒಂದು ಕಳ್ಳತನವಾಗಿದೆ. ಇದನ್ನು ವೈಜ್ಞಾನಿಕವಾಗಿ ಅಲ್ಡಬ್ರಾಚೆಲಿಸ್ ಗಿಗಾಂಟಿಯಾ ಎಂದು ಕರೆಯಲಾಗುತ್ತದೆ. ಗ್ಯಾಲಪಗೋಸ್ ಗಾತ್ರಗಳ ಪೈಕಿ ಆಲ್ಡಾಬ್ರಾ ಆಮೆಗಳು ಎರಡನೇ ಅತೀ ದೊಡ್ಡವಾಗಿವೆ. ಇವು 150 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದು, ಭೂಮಿ ಮೇಲೆ ಅತಿ ಹೆಚ್ಚು ಕಾಲ ಜೀವಿಸುವ ಪ್ರಾಣಿಗಳ ಪೈಕಿ ಈ ಆಮೆಗಳು ಸಹ ಸೇರಿವೆ. ಆಲ್ಡಾಬ್ರಾಗಳು 1.5 ಮೀಟರ್‍ಗಿಂತ ಹೆಚ್ಚು ಉದ್ದ ಹಾಗೂ 200 ಕೆ.ಜಿ. ವರೆಗೆ ತೂಕವಿರುತ್ತವೆ.
ಮದ್ರಾಸ್ ಮೊಸಳೆ ಉದ್ಯಾನವನದಿಂದ ಕಾಣೆಯಾಗಿರುವ ಈ ಆಮೆ 50 ವರ್ಷಗಳದ್ದಾಗಿದ್ದು, 80 ರಿಂದ 100 ಕೆ.ಜಿ. ತೂಕವಿತ್ತು. ವೈದ್ಯಕೀಯ ಪ್ರಯೋಜನಗಳಿಗೆ ಪ್ರಾಣಿಗಳ ಬಿಡಿ ಭಾಗಕ್ಕಾಗಿ ಈ ಆಮೆಯನ್ನು ಕದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಇನ್ನೂ ಉದ್ಯಾನವನದ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಆಮೆಯ ಚಿತ್ರದೊಂದಿಗೆ ಕ್ರಿಸ್‍ಮಸ್ ಶುಭಾಶಯ ಕೋರಿರುವುದು ಚರ್ಚೆಗೆ ಕಾರಣವಾಗಿದೆ. ಉದ್ಯಾನದ ನಿರ್ದೇಶಕ ಈ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.