Connect with us

ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್: ಉಪ ಆಯುಕ್ತರಿಂದ ನೋಟಿಸ್

ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್: ಉಪ ಆಯುಕ್ತರಿಂದ ನೋಟಿಸ್

– 5 ಲಕ್ಷ ರೂ ಮೌಲ್ಯದ ಅಕ್ರಮ ಮದ್ಯ ಜಪ್ತಿ
– ಲಾಕ್ ಡೌನ್ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೆ ಮದ್ಯ ಹಂಚಿಕೆ

ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯಲು ಸಾಥ್ ನೀಡುತ್ತಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಗೆ, ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ ನಾಯಕ್ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ರಾಯಚೂರು‌ ಜಿಲ್ಲೆಯಲ್ಲಿ ವಾರಕ್ಕೆ ಎರಡು ದಿನ ಮಾತ್ರ ಅದೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರ ವರೆಗೆ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ವಾರಪೂರ್ತಿ ಅಕ್ರಮ ಮದ್ಯ ಮಾರಾಟ ನಡೆಯಲು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೇ ಸಾಥ್ ನೀಡಿದ್ದಾರೆ. ಅಬಕಾರಿ ಉಪ ಆಯುಕ್ತರ ದಾಳಿ ವೇಳೆ ಅಬಕಾರಿ ಇನ್ಸ್ ಪೆಕ್ಟರ್ ಬಣ್ಣ ಬಯಲಾಗಿದೆ.

ರಾಯಚೂರಿನ ರಾಜ್ಯ ಪಾನೀಯ ನಿಗಮ ನಿಯಮಿತ ಗೋದಾಮಿನಿಂದಲೇ ಕಳ್ಳವ್ಯವಹಾರ ನಡೆದಿದ್ದು, ಅಬಕಾರಿ ಇನ್ಸ್ ಪೆಕ್ಟರ್ ಮೋನಪ್ಪ, ಗೋದಾಮಿನ ವ್ಯವಸ್ಥಾಪಕ ಶಿವಪ್ಪರಿಂದ ಅಕ್ರಮ ದಂಧೆ ನಡೆದಿರುವುದು ಬಯಲಾಗಿದೆ. ಲಾಕ್ ಡೌನ್ ಹಿನ್ನೆಲೆ ಅಧಿಕಾರಿಗಳಿಂದಲೇ ಅಕ್ರಮ ಮಾರಾಟಕ್ಕೆ ಮದ್ಯ ಸರಬರಾಜಾಗುತ್ತಿರುವುದು ಬೆಳಕಿಗೆ ಬಂದಿದೆ. ಲಾಕ್ ಡೌನ್ ನಿಯಮ ಮೀರಿ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಎಂ.ನಾಯಕ ಗೋದಾಮಿನ ಮೇಲೆ ದಾಳಿ ಮಾಡಿ ವಾಹನಗಳಿಗೆ ತುಂಬಿದ್ದ ಮದ್ಯವನ್ನ ಅನ್‍ಲೋಡ್ ಮಾಡಿಸಿದ್ದಾರೆ. ಅಬಕಾರಿ ಇನ್ಸ್ ಪೆಕ್ಟರ್ ಮೋನಪ್ಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಇದನ್ನು ಓದಿ: ದಕ್ಷಿಣ ಕನ್ನಡದಲ್ಲಿ ಜೂನ್ 20ರವರೆಗೆ ಲಾಕ್‍ಡೌನ್ ಮುಂದುವರಿಕೆ

ಅಕ್ರಮಕ್ಕೆ ಆಸ್ಪದ ನೀಡಿ ಕರ್ತವ್ಯ ಲೋಪ ಎಸಗಿದ್ದಲ್ಲದೆ, ಅಧಿಕಾರಿಗಳಿಗೆ ಮಾಹಿತಿ ನೀಡದೆ ಮನಬಂದತೆ ತಡರಾತ್ರಿವರೆಗೆ ಮದ್ಯ ಹಂಚಿಕೆ ಮಾಡಿರುವ ಆರೋಪ ಹಿನ್ನೆಲೆ ನೋಟಿಸ್ ಜಾರಿ ಮಾಡಲಾಗಿದೆ. ಅಕ್ರಮ ಮದ್ಯ ಹೊರಗಡೆಗೆ ಸಾಗಿಸುತ್ತಿದ್ದ ಎರಡು ವಾಹನ, 5 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದೆ. ಮದ್ಯದಂಗಡಿ ಮಾಲೀಕರಿಗೆ ಮದ್ಯ ವಿತರಣೆ ನೆಪದಲ್ಲಿ ಮಧ್ಯರಾತ್ರಿ ಕಳ್ಳ ವ್ಯವಹಾರ ನಡೆದಿರುವುದು ಬಯಲಾಗಿದೆ.

ನಗರದ ಎಪಿಎಂಸಿ ಆವರಣದಲ್ಲಿರುವ ಕೆ.ಎಸ್.ಬಿ.ಸಿಎಲ್ ಡಿಪೋ ಗೋದಾಮಿನಿಂದ ನೇರವಾಗಿ ಗ್ರಾಮೀಣ ಭಾಗಗಳಿಗೆ ಮದ್ಯ ಸರಬರಾಜು ಆಗಿದ್ದು, ಮದ್ಯದ ಅಂಗಡಿಗಳ ಮಾಲೀಕರಿಗೂ ಮನಬಂದಂತೆ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಎಪಿಎಂಸಿ ಬಳಿಯೇ ರಾತ್ರಿ ವೇಳೆ ಸಿಕ್ಕಿಬಿದ್ದ ಬೈಕ್ ಹಾಗೂ ಮಹೀಂದ್ರಾ ವಾಹನದಲ್ಲಿ ಲಕ್ಷಾಂತರ ರೂ. ಮದ್ಯ ಸಾಗಣೆ ಮಾಡಲಾಗುತ್ತಿತ್ತು, ಅಕ್ರಮ ಮದ್ಯ ಸಾಗಣೆ ಹಿನ್ನೆಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದನ್ನು ಓದಿ:ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳ ಪರವಾನಗಿ ರದ್ದು, ಬೀಗ ಜಡಿದ ಪಾಲಿಕೆ ಅಧಿಕಾರಿಗಳು

ಕಳ್ಳ ವ್ಯವಹಾರದಲ್ಲಿ ಸಿಕ್ಕಿಬಿದ್ದರೂ ಇನ್ಸ್ ಪೆಕ್ಟರ್ ಮೋನಪ್ಪ ಅಧಿಕಾರದಲ್ಲಿ ಮುಂದುವರಿದಿದ್ದು ಕೂಡಲೇ ಅಮಾನತ್ತುಗೊಳಿಸುವಂತೆ ಅನ್ಯಾಯಕ್ಕೊಳಗಾದ ಮದ್ಯದ ಅಂಗಡಿಗಳ ಮಾಲೀಕರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಲಾಕ್ ಡೌನ್‍ನಲ್ಲೂ ಕರ್ತವ್ಯ ಲೋಪವೆಸಗಿ ಅಮಾನತ್ತಾಗಿದ್ದ ಅಬಕಾರಿ ನಿರೀಕ್ಷಕ ಮೋನಪ್ಪ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪಗಳನ್ನ ಹೊತ್ತಿದ್ದಾರೆ.

Advertisement
Advertisement