Wednesday, 11th December 2019

ಕಂಬಕ್ಕೆ ಕಟ್ಟಿ, ಪೆಟ್ರೋಲ್ ಸುರಿದು ಮಗನನ್ನೇ ಜೀವಂತವಾಗಿ ಸುಟ್ಟ ತಂದೆ-ತಾಯಿ!

ಹೈದರಾಬಾದ್: ಕುಡಿತದ ಚಟದಿಂದ ಬೇಸತ್ತು ಸ್ವತಃ ತಂದೆ-ತಾಯಿಯೇ ಮಗನನ್ನು ಜೀವಂತವಾಗಿ ಸುಟ್ಟಿರುವ ಭೀಕರ ಘಟನೆ ತೆಲಂಗಾಣದ ವಾರಂಗಲ್‍ನ ಗ್ರಾಮೀಣ ಜಿಲ್ಲೆಯಲ್ಲಿ ನಡೆದಿದೆ.

ಹೈದರಾಬ್‍ನಿಂದ 200 ಕಿ.ಮೀ.ದೂರದಲ್ಲಿರುವ ವಾರಂಗಲ್ ಗ್ರಾಮೀಣ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿತದ ಚಟ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮಗನಿಂದ ಬೇಸತ್ತ ಕೆ.ಪ್ರಭಾಕರ್ ಹಾಗೂ ವಿಮಲಾ ಅವರು ತಮ್ಮ ಮಗನಾದ ಕೆ.ಮಹೇಶ ಚಂದ್ರ(42)ನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ.

ಮಹೇಶ್ ಕುಡಿತದ ಚಟಕ್ಕೆ ಒಳಗಾಗಿದ್ದ, ಯಾವಾಗಲೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು. ಆತನ ಕಿರುಕುಳ ಸಹಿಸಲು ತಂದೆ, ತಾಯಿಗೆ ಸಾಧ್ಯವಾಗಿಲ್ಲ. ಮಹೇಶ್ ಕಾಟ ತಾಳಲಾರದೇ ಪತ್ನಿ ಎರಡು ತಿಂಗಳ ಹಿಂದೆಯೇ ತವರು ಮನೆಗೆ ಹೋಗಿದ್ದಳು. ಅಂದಿನಿಂದ ಈತ ತಂದೆ-ತಾಯಿ ಬಳಿಯೇ ಇದ್ದ. ಅಲ್ಲದೆ ಹಣಕ್ಕಾಗಿ ಅವರನ್ನು ಪೀಡಿಸುತ್ತಿದ್ದ, ಕಿರುಕುಳ ನೀಡುವ ಮೂಲಕ ಜೀವ ಹಿಂಡುತ್ತಿದ್ದನು. ಗ್ರಾಮಸ್ಥರು ಸಹ ಈತನಿಗೆ ಹಲವು ಬಾರಿ ಹೊಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರು ಮಕ್ಕಳ ತಂದೆಯಾಗಿರುವ ಮಹೇಶ್, ರಾತ್ರಿ ಕಂಠಪೂರ್ತಿ ಕುಡಿದು ಬಂದು ಹೆತ್ತವರನ್ನು ಹೊಡೆಯಲು ಪ್ರಾರಂಭಿಸಿದನು. ಈ ಹಿಂಸೆಯನ್ನು ಸಹಿಸಲಾಗದೆ ಆತನ ತಂದೆ, ತಂದೆ-ತಾಯಿ ಮಹೇಶ್‍ನನ್ನು ಕಂಬಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ವಾರಂಗಲ್ ಕೃಷಿ ಮಾರುಕಟ್ಟೆಯಲ್ಲಿ ಕ್ಲರ್ಕ್ ಕೆಲಸ ಮಾಡುತ್ತಿದ್ದ ಮಹೇಶ್, ತಂದೆ-ತಾಯಿ ಹಚ್ಚಿದ ಬೆಂಕಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ದಮೆರಾದಿಂದ ಹಳ್ಳಿಗೆ ಧಾವಿಸಿದ್ದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಹೇಶ್ ಪೋಷಕರನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *