Friday, 13th December 2019

Recent News

ಭೀಕರ ಪ್ರವಾಹಕ್ಕೆ ಅಸ್ಸಾಂ ತತ್ತರ- 2 ಕೋಟಿ ನೆರವು ನೀಡಲು ಮುಂದಾದ ಅಕ್ಷಯ್ ಕುಮಾರ್

ನವದೆಹಲಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂಗೆ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂಪಾಯಿಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಲು ಮುಂದಾಗಿದ್ದಾರೆ.

ತಮ್ಮ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಘೋಷಿಸಿಕೊಂಡಿರುವ ಅಕ್ಷಯ್ ಕುಮಾರ್, ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ಥರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇತ್ತ ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳದಲ್ಲಿ ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂಗೆ ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ಬ್ರಹ್ಮಪುತ್ರ ನದಿಯ ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಭೂಕುಸಿತವಾಗಿ ಈವೆರೆಗೆ 15 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಪ್ರವಾಹದಿಂದ 46 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿದ್ದಾರೆ. ಕಾಜಿರಂಗದಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಾಣಿಗಳ ಮೇಲೆ ಪ್ರವಾಹ ಪರಿಣಾಮ ಬೀರಿದೆ.

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ.90ರಷ್ಟು ಭಾಗವು ಜಲಾವೃತವಾಗಿದೆ ಎನ್ನಲಾಗಿದೆ. ಅಲ್ಲದೆ ಪ್ರಾಣಿಗಳು ಸುರಕ್ಷಿತ ಸ್ಥಳವನ್ನು ಹುಡುಕಿ ಸಾಗುವಾಗ ಹೆದ್ದಾರಿ ಮೇಲೆ ಹೋಗುತ್ತದೆ. ಹೀಗಾಗಿ ಉದ್ಯಾನವನವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಸವಾರರು ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಅಸ್ಸಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸುಮಾರು 4,175 ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 90 ಸಾವಿರ ಹೆಕ್ಟರ್ ಕೃಷಿ ಭೂಮಿ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ.

Leave a Reply

Your email address will not be published. Required fields are marked *