Sunday, 22nd September 2019

ವರ್ಷಕ್ಕೆ 444 ಕೋಟಿ ಸಂಪಾದನೆ – ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್‌ಗೆ  ಸ್ಥಾನ

ಮುಂಬೈ: ವರ್ಷಕ್ಕೆ 444 ಕೋಟಿ ಸಂಪಾದನೆ ಮಾಡುವ ಮೂಲಕ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

35ನೇ ಸ್ಥಾನ ಪಡೆಯುವ ಮೂಲಕ ಮೂಲಕ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಅಕ್ಷಯ್ ಕುಮಾರ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಿಟ್ ಮೇಕರ್ ಟೇಲರ್ ಸ್ವಿಫ್ಟ್ ಅವರು ಮೊದಲ ಸ್ಥಾನ ಪಡೆದಿದ್ದಾರೆ.

ಅಕ್ಷಯ್ ಕುಮಾರ್ ಅವರನ್ನು “ಬಾಲಿವುಡ್‍ನ ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್” ಎಂದು ಬಣ್ಣಿಸಿದೆ. ಅಕ್ಷಯ್ ಕುಮಾರ್ ಅವರು ಒಂದು ಚಿತ್ರಕ್ಕೆ 35 ರಿಂದ 70 ಕೋಟಿಯವರೆಗೆ ಸಂಭಾವನೆ ಪಡೆಯುತ್ತಾರೆ. ಸಾಲು ಸಾಲು ಉತ್ತಮ ಚಿತ್ರವನ್ನು ಮಾಡುತ್ತಿರುವ ಅಕ್ಷಯ್ ಅವರು ಪ್ರಸ್ತುತ ಜಗನ್ ಶಕ್ತಿಯ ಮಿಷನ್ ಮಂಗಲ್, ಫರ್ಹಾದ್ ಸಂಜಿಯ ಹೌಸ್ ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ ಲಾರೆನ್ಸ್ ಅವರ ಲಕ್ಷ್ಮಿ ಬಾಂಬ್ ಮತ್ತು ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರಗಳನ್ನು ಮಾಡುತ್ತಿದ್ದಾರೆ.

ಇದರ ಜೊತೆಗೆ ಅಕ್ಷಯ್ ಕುಮಾರ್ ಅವರು 20 ಕ್ಕೂ ಹೆಚ್ಚಿನ ಉನ್ನತ ಬ್ರಾಂಡ್‍ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಜಾಹೀರಾತಿನಿಂದಲೂ ಹೆಚ್ಚು ಸಂಭಾವನೆ ಸಿಗುತ್ತಿದೆ. ಜೂನ್ 2018 ರಿಂದ ಜೂನ್ 2019 ರವರೆಗೆ ಒಟ್ಟು 444 ಕೋಟಿ ರೂ ಸಂಪಾದನೆ ಮಾಡಿದ ಅಕ್ಷಯ್ ಕುಮಾರ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎ-ಲಿಸ್ಟರ್‍ ಗಳಾದ ರಿಹಾನ್ನಾ, ಜಾಕಿ ಚಾನ್, ಬ್ರಾಡ್ಲಿ ಕೂಪರ್ ಮತ್ತು ಸ್ಕಾರ್ಲೆಟ್ ಜೋಹಾನ್ಸನ್‍ರನ್ನು ಹಿಂದಿಕ್ಕಿದ್ದಾರೆ.

ಈ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಿಷನ್ ಮಂಗಳ್ ಚಿತ್ರ ಬಿಡುಗಡೆ ಮಾಡಲು ಅಕ್ಷಯ್ ಸಜ್ಜಾಗಿದ್ದಾರೆ. ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ ಮಿಷನ್ ಮಾರ್ಸ್ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆ ಸೋನಾಕ್ಷಿ ಸಿನ್ಹಾ, ವಿದ್ಯಾ ಬಾಲನ್, ತಾಪ್ಸಿ ಪನ್ನು, ಶರ್ಮನ್ ಜೋಶಿ, ಕೀರ್ತಿ ಕುಲ್ಹಾರಿ ಮತ್ತು ನಿತ್ಯಾ ಮೆನೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *