ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಜೊತೆ ತುಳು ಸಿನಿಮಾ ಮಾಡ್ತಾರಾ ಸುನೀಲ್ ಶೆಟ್ಟಿ?

ಮುಂಬೈ: ಮಂಗಳೂರು ಸೀಮೆಯ ಕರಾವಳಿ ಪ್ರದೇಶದಿಂದ ಹೋದವರು ಪ್ರಸಿದ್ಧ ನಟ ನಟಿಯರಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದಾರೆ. ಅಂಥ ಕರಾವಳಿಗರ ಸಾಲಿನಲ್ಲಿ ಐಶ್ವರ್ಯಾ ರೈ, ಸುನೀಲ್ ಶಿಟ್ಟಿ, ಶಿಲ್ಪಾ ಶೆಟ್ಟಿ ಮುಂತಾದವರು ಬಾಲಿವುಡ್ ಐಕಾನ್‍ಗಳಾಗಿ ಮಿಂಚುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ತುಳು ಸಿನಿಮಾವೊಂದನ್ನು ಮಾಡಿದರೆ ತುಳುವರ ಪಾಲಿಗದು ಹಬ್ಬ. ಇಂಥಾದ್ದೊಂದು ಹಬ್ಬ ಶುರುವಾಗೋ ಸೂಚನೆಯನ್ನು ಸುನೀಲ್ ಶೆಟ್ಟಿ ರವಾನಿಸಿದ್ದಾರೆ!

ಬಾಲಿವುಡ್ ನಲ್ಲಿ ಸ್ಟಾರ್ ಆಗಿದ್ದರೂ ಕೂಡಾ ತುಳುನಾಡ ಸಂಸ್ಕೃತಿ, ತುಳು ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು ಸುನೀಲ್ ಶೆಟ್ಟಿ. ಕರಾವಳಿಯ ಕಾರ್ಯಕ್ರಮಗಳಿಗೆಲ್ಲ ಓಡೋಡಿ ಬಂದು ಪಾಲ್ಗೊಳ್ಳುವ ಸುನೀಲ್ ಉಡುಪಿಯಲ್ಲಿ ನಡೆದ ಬಂಟರ ಕಾರ್ಯಕ್ರಮಕ್ಕೂ ಹಾಜರಾಗಿದ್ದರು. ಇದರಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಆ ಸಮುದಾಯದ ಸ್ಯಾಂಡಲ್‍ವುಡ್ ನಟ ನಟಿಯರೂ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರ ಹೆಸರು ಹೇಳಿಯೇ ಅಭಿನಂದಿಸಿದ ಸುನೀಲ್ ತುಳುನಾಡು ತಮ್ಮ ತಾಯಿ ನೆಲ. ತುಳು ಭಾಷೆ ತಮ್ಮ ಶಕ್ತಿ ಅಂದಿದ್ದಾರೆ. ಇದೇ ಸಂದರ್ಭದಲ್ಲಿ ತಾವು ಕನ್ನಡ ಚಿತ್ರದಲ್ಲಿ ನಟಿಸುತ್ತಿರೋ ವಿಚಾರವನ್ನೂ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಿವುಡ್ ಸ್ನೇಹಿತರು ಮತ್ತು ತುಳುನಾಡಿನವರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ ಮತ್ತು ರೋಹಿತ್ ಶೆಟ್ಟಿ ಮುಂತಾದವರು ಜೊತೆಗೂಡಿ ತುಳು ಚಿತ್ರವೊಂದನ್ನು ಮಾಡುವ ಆಲೋಚನೆ ಇರೋದಾಗಿಯೂ ಹೇಳಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *