Connect with us

Bagalkot

ಇನ್ಫೋಸಿಸ್‍ನಲ್ಲಿ ಕೆಲಸ ಬಿಟ್ಟು ಕೃಷಿಕಳಾದ ಮಹಿಳೆಯ ಯಶೋಗಾಥೆ

Published

on

-ಎಂಜಿನಿಯರ್ ಆಗುವ ಕನಸು ಸತ್ತಿತ್ತು, ಛಲ ಸತ್ತಿರಲಿಲ್ಲ

ರಾಯಚೂರು/ಬಾಗಲಕೋಟೆ : ಕಾಲೇಜು ಕಲಿಯುವ ವೇಳೆ ಪಂಚೆಯುಟ್ಟ ವ್ಯಕ್ತಿಯನ್ನು ನೋಡಿ ಓಡಿ ಹೋಗುತ್ತಿದ್ದ ಮಹಿಳೆ ಇಂದು ಎಂಟು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಲಕ್ಷಾಂತರ ರೂ. ಸಂಪಾದಿಸುತ್ತಿರುವ ಪ್ರಗತಿ ಪರ ರೈತ ಮಹಿಳೆ, ಪಬ್ಲಿಕ್ ಹೀರೋ ಕವಿತಾ ಮಿಶ್ರಾ ಯುವ ಹಾಗೂ ಮಹಿಳಾ ರೈತರಿಗೆ ಕಿವಿಮಾತು ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳದ ನಿವಾಸಿಯಾಗಿರುವ ಕವಿತಾ ಮಿಶ್ರಾರ ಸಾಹಸಗಾಥೆಯನ್ನು ಪಬ್ಲಿಕ್ ಟಿವಿ 2017ರಲ್ಲಿ ಬಿತ್ತರಿಸಿತ್ತು. ಪಬ್ಲಿಕ್ ಹೀರೋ ಸಂಚಿಕೆಯಲ್ಲಿ ಕವಿತಾ ಮಿಶ್ರಾ ಅವರ ವಿಶೇಷ ಕಾರ್ಯಕ್ರಮ ಫೆಬ್ರವರಿ 27, 2017ರಂದು ಪ್ರಸಾರ ಮಾಡಿತ್ತು. ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಕವಿತಾ ಮಿಶ್ರಾರ ಸ್ಫೂರ್ತಿದಾಯಕ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪಾದರಸದಂತೆ ಹರಿದಾಡುತ್ತಿದ್ದು, ಮನಸೋತ ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಕೃಷಿ ರತ್ನ ಮಹಿಳೆ:
ಪ್ರವಚನಕಾರ ಈಶ್ವರ ಮಂಟೂರ್ ಆಯೋಜಿಸಿದ್ದ ಸಾಧಕರ ಸಸ್ಮಾನ ಕಾರ್ಯಕ್ರಮದಲ್ಲಿ ಕೃಷಿ ರತ್ನ ಪ್ರಶಸ್ತಿ ನೀಡಿ ಕವಿತಾ ಮಿಶ್ರಾ ಅವರನ್ನು ಸನ್ಮಾನಿಸಲಾಯತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನೆರದಿದ್ದ ರೈತರೊಂದಿಗೆ ಕೃಷಿ ಅನುಭವವನ್ನು ಹಂಚಿಕೊಂಡರು.

ವಿಡಿಯೋದಲ್ಲಿ ಏನಿದೆ?
ಓದಿದ್ದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಗಂಡನ ಮನೆಯಲ್ಲಿ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಅವಕಾಶವಿರಲಿಲ್ಲ. ತವರು ಮನೆಯಲ್ಲಿ ಚೆನ್ನಾಗಿ ಓದಿಸಿದ್ದರು. ಹೀಗಾಗಿ ಹೊಲದಲ್ಲಿ ದುಡಿದು ಗೊತ್ತಿರಲಿಲ್ಲ. ಏಕೆಂದರೆ ಕೃಷಿ ಎಸಿ ರೂಂನಲ್ಲಿ ಕುಳಿತು ಲಕ್ಷಗಟ್ಟಲೇ ಹಣ ಎಣಿಸುವ ವೃತ್ತಿಯಲ್ಲ. ಮೈದಾ ಹಿಟ್ಟಿನಂತಿದ್ದ ಬಣ್ಣವನ್ನು ಮಣ್ಣಿಗೆ ನೀಡಿ ಮಣ್ಣಿನ ಬಣ್ಣವನ್ನು ನಾನು ಪಡೆದಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಕೆಲಸದ ಪರಿಯನ್ನು ವಿವರಿಸಿದ್ದಾರೆ.

ಇನ್ಫೋಸಿಸ್‍ನಲ್ಲಿ ಕೆಲಸ ಸಿಕ್ಕಿತ್ತು, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರೆ ಕರಿಬೇವು, ಕೊತ್ತಂಬರಿ ರೀತಿಯಲ್ಲಿ ಆಗುತ್ತಿದೆ. ಮಣ್ಣನ್ನು ನಂಬಿ ಕೃಷಿ ಪ್ರಾರಂಭಿಸಿದೆ ಇಂದು ಆ ಮಣ್ಣು ರಾಜ್ಯ ಮಟ್ಟ, ರಾಷ್ಟ್ರ ಮಟ್ಟ, ಅಂತರಾಷ್ಟ್ರೀಯ ಮಟ್ಟಕ್ಕೆ ನನ್ನನ್ನು ಕರೆದುಕೊಂಡು ಹೋಗಿದೆ. ನಾವೆಲ್ಲರೂ (ಮಹಿಳೆಯರು) ನದಿ ಇದ್ದ ಹಾಗೆ ನದಿ ಹರಿದು ಬರಬೇಕಾದರೆ, ಸಮತಟ್ಟಾದ ನೆಲ ಸಿಗುವುದಿಲ್ಲ. ಹಾಗೆಯೇ ನಮ್ಮ ಜೀವನದಲ್ಲೂ ನಾವು ಅಂದುಕೊಂಡದ್ದು ಆಗುವುದಿಲ್ಲ. ನದಿಯು ನೆಲ ಸಮತಟ್ಟಾಗಿಲ್ಲ ಎಂದು ಮರಳಿ ಹರಿಯುವುದಿಲ್ಲ. ನದಿ ಪ್ರಾರಂಭವಾಗುವುದೇ ಸಮುದ್ರ ಸೇರಲು, ಹರಿಯುವುದೇ ಅದರ ಕೆಲಸ. ಕಂದಕ, ಗುಡ್ಡಗಳು ಎದುರಾಗುತ್ತವೆ ಎಂದು ಹಿಂದಿರುಗುವುದಿಲ್ಲ. ಅವೆಲ್ಲವನ್ನು ಸೀಳಿಕೊಂಡು ಮುನ್ನುಗ್ಗುತ್ತದೆ. ಮಹಿಳೆಯರೂ ಸಹ ಹಾಗೆಯೇ ಎಂತಹ ಕಷ್ಟಗಳನ್ನೂ ಎದುರಿಸಲು ಸಿದ್ಧರಾಗಿರಬೇಕು. ಒಂದು ಮನೆತನದ ಮಾನ, ಮರ್ಯಾದೆ, ಸಾಮಾಜಿಕ ಸಂಸ್ಕೃತಿ ಹಾಗೂ ಆರ್ಥಿಕ ಮಟ್ಟಕ್ಕೆ ಮಹಿಳೆಯರೇ ರೂವಾರಿಗಳು ಎಂದರು.

ಯಾವತ್ತೂ ಹೆಂಡಿ, ಕಸ ಬಳಿದಿರಲಿಲ್ಲ, ಹೊಲದಲ್ಲಿ ಕೆಲಸ ಮಾಡಿ ತಿಳಿದಿರಲಿಲ್ಲ. ಮೊದಲು ಹಾಲು ಹಿಂಡಬೇಕಾದರೆ ಎಮ್ಮೆ ನನ್ನ ಕಾಲ ಮೇಲೆ ಕಾಲಿಟ್ಟಿತ್ತು. ನಾಲ್ಕು ಬಾರಿ ಒದ್ದಿತ್ತು. ಆದರೆ ಇಂದು ನಾನು 15 ಲೀಟರ್ ಹಾಲು ಕರೆಯುತ್ತೇನೆ. ಕಾಲೇಜಿನಲ್ಲಿ ಓದಬೇಕಾದರೆ ಪಂಚೆಯವರು ಬಂದರೆ ಓಡಿ ಹೋಗುತ್ತಿದ್ದೆ ಅಷ್ಟು ಸೊಕ್ಕಿತ್ತು. ಆದರೆ ಪಂಚೆ ಉಟ್ಟವರು ಕೆಲಸ ಮಾಡಿದ್ದರಿಂದಲೇ ಸಾಧನೆ ಮಾಡಿದ್ದೇನೆ ಎಂದು ಯುವ ರೈತರಿಗೆ ರೋಮಾಂಚನಕಾರಿ ಮಾತುಗಳನ್ನಾಡಿದ್ದಾರೆ.


ನಾನೂ ಸಹ ಸಾವಿರ ಬಾರಿ ಜೀವನದಲ್ಲಿ ಬಿದ್ದಿದ್ದೇನೆ. ಆದರೆ ಒಂದೇ ಬಾರಿ ಎದ್ದಿದ್ದೇನೆ. ಬಿತ್ತಾಗ ದೃತಿಗೆಡಬೇಕಿಲ್ಲ. ಗಂಡ ಎಂದರೆ ಗುಡ್ಡ ಇದ್ದ ಹಾಗೆ. ಹೀಗಾಗಿ ಪತಿ-ಪತ್ನಿಯರು ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಜತೆಯಾಗಿದ್ದರೆ ಯಾವುದೇ ಕಷ್ಟವನ್ನು ಎದುರಿಸಬಹುದು.

ಒಂಟಿ ಬೆಳೆ ಮಾರಕ, ಬಹುಬೆಳೆ ಪೂರಕ:
ರೈತರ ಬದುಕು ಕಷ್ಟದ ಜೀವನ, ಎಲ್ಲವನ್ನೂ ಹಾಕುತ್ತೇವೆ, ಜತೆಗೆ ನಮ್ಮನ್ನು ನಾವೇ ಹಾಕುತ್ತೇವೆ. ಒಂದು ಎಕರೆಗೆ 10-15 ಕ್ವಿಂಟಲ್ ಧಾನ್ಯ ಬೆಳೆಯುತ್ತೇವೆ. ಅದಕ್ಕೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತರ ಪ್ರಯತ್ನಕ್ಕೆ ಅರ್ಥವಿರುವುದಿಲ್ಲ. ಹೀಗಾಗಿ ರೈತನಿಗೆ ಬೆಲೆ ಸಿಗುತ್ತಿಲ್ಲ. ಅವನ ಹೆಂಡತಿ, ಮಕ್ಕಳಿಗೂ ಗೌರವ ಸಿಗುತ್ತಿಲ್ಲ. ಎಲ್ಲದಕ್ಕಿಂತ ಸ್ವಾಭಿಮಾನದ ಜೀವನ ರೈತನದ್ದು. ರೈತ ಅನ್ನದಾತ, ಅವರು ಕೊಡುವವನೇ ಹೊರತು ಬೇಡುವವನಲ್ಲ.

ರೈತರಿಗೆ ಪ್ರತಿ ತಿಂಗಳಿಗೆ ಸಂಬಳ ಬರುವುದಿಲ್ಲ, ನಿವೃತ್ತಿ ಬಳಿಕ ಪೆನ್ಷನ್ ಬರುವುದಿಲ್ಲ. ಹೀಗಾಗಿ ರೈತರಿಗೆ ಹೆಣ್ಣು ಕೊಡಲು ಜನ ಯೋಚಿಸುತ್ತಿದ್ದಾರೆ. ರೈತರು ಈ ಕುರಿತು ಚಿಂತಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ಪ್ರತಿ ತಿಂಗಳು ಸಂಬಳದ ರೀತಿ ಆದಾಯ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿಯನ್ನು ಮಾಡಬೇಕು.

https://www.youtube.com/watch?v=4q1NZurnxS8

ನಾನೂ ಸಹ 8 ಎಕರೆ 10 ಗುಂಟೆ ಕೃಷಿ ಭೂಮಿಯಲ್ಲಿ ನಾನು 2,100 ಶ್ರೀಗಂಧ, 1,000 ದಾಳಿಂಬೆ, 600 ಮಾವು, 600 ಸೀಬೆ ಹಣ್ಣು, 450 ಸೀತಾಫಲ, 100 ನೀರಲ ಹಣ್ಣು, 100 ಬೆಟ್ಟದ ನೆಲ್ಲಿಕಾಯಿ, 200 ನಿಂಬೆ ಗಿಡ, 200 ಮೋಸಂಬೆ ಗಿಡ, 200 ಸಾಗವಾನಿ, 50 ಕರಿಬೇವು ಗಿಡ, ನುಗ್ಗೆಕಾಯಿ ಗಿಡ ಬೆಳೆಯುತ್ತಿದ್ದೇನೆ. ಇದರೊಂದಿಗೆ ಕುರಿ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಹೈನುಗಾರಿಕೆ ಇವೆಲ್ಲವನ್ನೂ ಮಾಡಿದ್ದೇನೆ. ಇದರಿಂದ ಮಾವಿನ ಸೀಸನ್‍ನಲ್ಲಿ ಮಾವಿನ ಹಣ, ದಾಳಿಂಬೆ ಸೀಸನ್‍ನಲ್ಲಿ ದಾಳಿಂಬೆ ಹಣ ಹೀಗೆ ಸತತವಾಗಿ ಹಣ ಬರುವಂತೆ ಬೆಳೆಗಳನ್ನು ಬೆಳೆಯಬೇಕು. ಆಗ ಪ್ರತಿ ತಿಂಗಳೂ ಆದಾಯ ನಿರೀಕ್ಷಿಸಲು ಸಾಧ್ಯ. ಮಾರುಕಟ್ಟೆ ವಿರುದ್ಧ ನಿಲ್ಲಲು ಸಾಧ್ಯವಿಲ್ಲ.

ಮಾರುಕಟ್ಟೆಗೆ ತಕ್ಕಂತೆ ಬೆಳೆ ಬೆಳೆಯಬೇಕು. ಇದೆಲ್ಲ ತಕ್ಷಣಕ್ಕೆ ಆದರೆ, ಇನ್ನೂ ಶ್ರೀಗಂಧ ಬೆಳೆ ಬೆಳೆದರೆ ಮುಪ್ಪಾವಸ್ಥೆಯಲ್ಲಿ ನಿಮಗೆ ಪೆನ್ಷನ್ ರೀತಿ ಹಣ ಲಭ್ಯವಾಗುತ್ತದೆ. ಒಂದು ಎಕರೆ ಶ್ರೀಗಂಧ ಬೆಳೆದರೆ 6 ಕೋಟಿ ರೂ. ಆದಾಯ ಪಡೆಯಬಹುದು. ಇಷ್ಟೆಲ್ಲ ವ್ಯವಸ್ಥಿತವಾಗಿ ಕೃಷಿ ಮಾಡಿದರೆ, ಸರ್ಕಾರ ಸಾಲ ಮನ್ನಾ ಮಾಡುವ ಪ್ರಶ್ನೆಯೇ ಬರುವುದಿಲ್ಲ. ನಾವು ಕೋಟ್ಯಾಧಿಪತಿಯಾಗುವ ಮೂಲಕ ಸರ್ಕಾರವನ್ನೂ ಕೋಟ್ಯಾಧಿಪತಿ ಮಾಡಬಹುದು.

ಜಗತ್ತು ರೈತನಿಗೆ ನೀಡುವ ಗೌರವದಲ್ಲಿ ಬದಲಾಗಬೇಕಿದೆ. ಈ ರೈತನ ಚಿತ್ರ ಬಿಡಿಸಲು ಹೇಳಿದರೆ ಹರಕು ಪಂಚೆ ಉಟ್ಟು ಮೋಡ ನೋಡುತ್ತಿರುವ ರೈತರನ್ನು ಮಕ್ಕಳು ಚಿತ್ರಿಸುತ್ತಾರೆ. ಆದರೆ, ಇದು ಬದಲಾಗಬೇಕು ರೈತರ ಚಿತ್ರ ಬಿಡಿಸಲು ಹೇಳಿದರೆ ಎಸಿ ಕಾರ್ ನಲ್ಲಿ ಕೋಟ್ ಹಾಕಿ ಕುಳಿತು ಸೆಲ್ಫಿ ಕ್ಲಿಕ್ಕಿಸುವ ಚಿತ್ರವನ್ನು ಬಿಡಿಸುವಂತಾಗಬೇಕು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]