ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 22,900 ಕೋಟಿ ರೂ.ಗಳ (3 ಬಿಲಿಯನ್ ಡಾಲರ್) ಹೂಡಿಕೆಯ ದೇಶದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಹಾಗೂ ಐಎಎಂಸಿ ಅನಲಾಗ್ ಫ್ಯಾಬ್ ಪ್ರೈವೆಟ್ ಲಿಮಿಟೆಡ್ ನಡುವೆ ಸಹಿ ಹಾಕಲಾಯಿತು.
7 ವರ್ಷಗಳ ಅವಧಿಯಲ್ಲಿ ಒಟ್ಟು 1,500 ಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಹಾಗೂ ಐಎಸ್ಎಂಇ ಪರವಾಗಿ ನಿರ್ದೇಶಕ ಅಜಯ್ಜಲನ್ ಸಹಿ ಹಾಕಿದರು. ಈ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ. ಒಡಂಬಡಿಕೆಯು ಇಸ್ರೇಲ್ ಹಾಗೂ ಭಾರತದ ನಡುವೆ ತಂತ್ರಜ್ಞಾನ ಹಾಗೂ ಸಂಸ್ಕೃತಿಗಳ ವಿನಿಮಯಕ್ಕೂ ವೇದಿಕೆ ಕಲ್ಪಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಪ್ರೀತಂ ಗೌಡ Vs ಎಚ್.ಡಿ.ರೇವಣ್ಣ ಜಟಾಪಟಿ – ರಾತ್ರೋ ರಾತ್ರಿ ತಾಲೂಕು ಕಚೇರಿ ಡೆಮಾಲಿಶ್
ವಿವಿಧ ರಾಜ್ಯಗಳು ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿದ್ದ ವೇಳೆಯಲ್ಲೇ ಈ ಮಹತ್ವದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಮಾಡಿದೆ. ಕೇವಲ ಆರ್ಥಿಕ ಪ್ರೋತ್ಸಾಹ ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣ ಮುಖ್ಯ ಎಂಬ ಕಾರಣಕ್ಕೆ ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಇದೊಂದು ಬಹುದೊಡ್ಡ ಹೆಜ್ಜೆ. ಸವಾಲುಗಳು ಸಹ ದೊಡ್ಡಮಟ್ಟದಲ್ಲಿಯೇ ಇವೆ. ಈ ಸವಾಲುಗಳನ್ನು ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಲು ಈ ಒಪ್ಪಂದ ಅವಕಾಶವನ್ನು ಕಲ್ಪಿಸಿದೆ. ಪ್ರಧಾನಿ ನರೇಂದ್ರಮೋದಿ ಅವರು ಸೆಮಿಕಂಡಕ್ಟರ್ ಮಿಷನ್ಗೆ ಅನುಮೋದಿಸಿದ್ದರಿಂದ ಕರ್ನಾಟಕವು ಈ ವಲಯದಲ್ಲಿ ಮುಂದುವರಿಯಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು
ಉನ್ನತ ಶಿಕ್ಷಣ ಮತ್ತು ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ ಕೃಷ್ಣಾ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಐಎಎಂಸಿ ಮುಖ್ಯಸ್ಥ ಇರೇಜ್ ಇಂಬರಮನ್ ಇನ್ನಿತರರು ಉಪಸ್ಥಿತರಿದ್ದರು.