Connect with us

Latest

ಆಗ್ರಾ ಹೆಸರನ್ನು ಬದಲಿಸಲು ಮುಂದಾದ ಯೋಗಿ ಸರ್ಕಾರ

Published

on

ಲಕ್ನೋ: ಅಲಹಬಾದ್, ಫೈಜಾಬಾದ್ ನಂತರ ಇದೀಗ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆಗ್ರಾ ಹೆಸರನ್ನು ಬದಲಿಸಲು ಚಿಂತನೆ ನಡೆಸಿದೆ.

ಈ ಹಿಂದೆ ರಾಜ್ಯ ಸರ್ಕಾರ ಅಲಹಬಾದ್ ಹೆಸರನ್ನು ಪ್ರಯಾಗ್‍ರಾಜ್, ಫೈಜಾಬಾದನ್ನು ಅಯೋಧ್ಯೆ ಹಾಗೂ ಮೊಘಲ್ಸರಾಯ್ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಬದಲಿಸಿತ್ತು. ಹೆಸರು ಬದಲಾಯಿಸುವ ಪರ್ವ ಮತ್ತೆ ಮುಂದುವರಿದಿದ್ದು, ಇದೀಗ ಆಗ್ರಾ ಹೆಸರನ್ನು ಅಗ್ರವಾನ್ ಎಂದು ಬದಲಿಸಲು ಮುಂದಾಗಿದೆ.

ಈ ಕುರಿತು ಅಂಬೇಡ್ಕರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸಂಶೋಧನೆ ನಡೆಸಲು ತಿಳಿಸಿದ್ದು, ಹೆಸರಿನ ಐತಿಹಾಸಿಕ ಅಂಶವನ್ನು ವಿಶ್ಲೇಷಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಪ್ರಸ್ತಾಪ ಬರುತ್ತಿದ್ದಂತೆ ಸಂಶೋಧನೆ ನಡೆಸಲು ಪ್ರಾರಂಭಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

ಆಗ್ರಾ ನಗರವನ್ನು ಬೇರೆ ಹೆಸರಿನಿಂದ ಕರೆಯಲಾಗುತಿತ್ತೆ ಈ ಕುರಿತು ಪುರಾವೆಗಳನ್ನು ಸಂಗ್ರಹಿಸಿ ಎಂದು ರಾಜ್ಯ ಸರ್ಕಾರ ನಮಗೆ ಪತ್ರ ಬರೆದಿದೆ. ಈ ಕುರಿತು ನಾವು ಸಂಶೋಧನೆ ಪ್ರಾರಂಭಿಸಿದ್ದೇವೆ. ಸಂಶೋಧನೆ ನಂತರ ಉತ್ತರಿಸುತ್ತೇವೆ ಎಂದು ವಿಭಾಗದ ಮುಖ್ಯಸ್ಥ ಪ್ರೊ.ಸುಗಮ್ ಆನಂದ್ ತಿಳಿಸಿದ್ದಾರೆ.

ತಾಜ್‍ಮಹಲ್ ಇರುವ ನಗರದ ಮೂಲ ಹೆಸರು ಅಗ್ರವಾನ್ ಎಂದು ಕೆಲವು ಇತಿಹಾಸಕಾರರು ನಂಬಿದ್ದರಿಂದ ಹೆಸರು ಬದಲಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಗ್ರವಾನ್ ಎಂಬ ಹೆಸರು ಆಗ್ರಾ ಎಂದು ಹೇಗೆ ಬದಲಾಯಿತು, ಯಾವ ಸಂದರ್ಭದಲ್ಲಿ ಆಯಿತು ಎಂಬುದನ್ನು ಅಧ್ಯಯನದಿಂದ ಪತ್ತೆ ಮಾಡುವಂತೆ ಸರ್ಕಾರ ಇತಿಹಾಸಕಾರರು ಹಾಗೂ ತಜ್ಞರನ್ನು ಕೇಳಿದೆ.

ಈ ಹಿಂದೆ ನಿಧನರಾದ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಅವರು ಆದಿತ್ಯನಾಥ್ ಅವರಿಗೆ ಪತ್ರ ಬರೆದು, ಆಗ್ರಾ ಎಂಬ ಹೆಸರನ್ನು ಅಗ್ರವಾನ್ ಎಂದು ಮರುನಾಮಕರಣ ಮಾಡುವಂತೆ ಕೋರಿದ್ದರು.

ತಾಜ್ ಮಹಲ್ ನಗರವಾಗಿ ಆಗ್ರಾ ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಕಾರಣ ಹೆಸರು ಬದಲಾಯಿಸುವುದನ್ನು ಅನೇಕರು ವಿರೋಧಿಸಿದ್ದಾರೆ. ಪ್ರವಾಸೋದ್ಯಮ ಹಾಗೂ ವ್ಯಾಪಾರ ತಜ್ಞರು ಸಹ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗ್ರಾವನ್ನು ತಾಜ್‍ಮಹಲ್ ನಗರವೆಂದು ವಿಶ್ವಾದ್ಯಂತ ಕರೆಯಲಾಗುತ್ತದೆ. ಹೆಸರು ಬದಲಾಯಿಸುವುದರಿಂದ ಗೊಂದಲ ಉಂಟಾಗುತ್ತದೆ ಎಂದು ಟ್ರಾವೆಲ್ ಮತ್ತು ಟೂರ್ ಆಪರೇಟರ್ ರಾಕೇಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.