Connect with us

Cricket

2020ರ ಐಪಿಎಲ್ ಆವೃತ್ತಿಯಿಂದ ಹರ್ಭಜನ್ ಸಿಂಗ್ ಔಟ್

Published

on

ಮುಂಬೈ: 2020ರ ಐಪಿಎಲ್ ಆವೃತ್ತಿಯಿಂದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ವೈಯುಕ್ತಿಕ ಕಾರಣಗಳಿಂದ ಹೊರ ನಡೆದಿದ್ದು, ತಮ್ಮ ನಿರ್ಧಾರವನ್ನು ಶುಕ್ರವಾರ ತಂಡದ ಮ್ಯಾನೇಜ್‍ಮೆಂಟ್‍ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಹರ್ಭಜನ್ ಸಿಂಗ್ 2020ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರ ನಡೆಯುತ್ತಿರುವ 2ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಸುರೇಶ್ ರೈನಾ ಯುಎಇಗೆ ತೆರಳಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ವಾಪಸ್ ಆಗಿದ್ದರು. ಆದರೆ ಹರ್ಭಜನ್ ಸಿಂಗ್ ತಂಡದೊಂದಿಗೆ ಪ್ರಯಾಣಿಸದೆ ಭಾರತದಲ್ಲೇ ಉಳಿದುಕೊಂಡಿದ್ದರು. ಆ ವೇಳೆಯೇ ಹರ್ಭಜನ್ ಟೂರ್ನಿಯಿಂದ ಹೊರಗುಳಿಯುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿತ್ತು. ಹರ್ಭಜನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ 2 ಬಾರಿ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಪಾಸಿಟಿವ್ ಬಂದಿದ್ದ ಮತ್ತಿಬ್ಬರು ಸಿಎಸ್‍ಕೆ ಆಟಗಾರರು 14 ದಿನಗಳ ಕ್ವಾರಂಟೈನ್ ಅವಧಿಯ ಬಳಿಕ ಕೋವಿಡ್ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಉಳಿದಂತೆ ಯುಎಇಗೆ ತೆರಳಿದ ಬಳಿಕವೂ ತರಬೇತಿ ಆರಂಭಿಸಿದ ಆಟಗಾರರು ಇಂದು ಮೈದಾನಕ್ಕಿಳಿಯುವ ಸಾಧ್ಯತೆ ಇದೆ.

ಕಳೆದ ವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ 13 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದೇ ಕಾರಣದಿಂದ ತಂಡದ ತರಬೇತಿ ಸೆಷನ್ ಆರಂಭ ತಡವಾಗಿತ್ತು. ಸಿಎಸ್‍ಕೆ ಹೊರತು ಪಡಿಸಿ ಉಳಿದ ತಂಡಗಳು ಅಭ್ಯಾಸವನ್ನು ಆರಂಭಿಸಿದ್ದವು. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ತೆರಳುವ ಮುನ್ನವೇ ಭಾರತದಲ್ಲೇ ತರಬೇತಿ ಶಿಬಿರವನ್ನು ನಡೆಸಿತ್ತು.

Click to comment

Leave a Reply

Your email address will not be published. Required fields are marked *