Saturday, 15th December 2018

Recent News

ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕನಾಗಿ ನಟಿಸಿದ್ದ ರಿಶಿ ಆ ನಂತರದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ ಶಶಾಂಕ್ ಬ್ಯಾನರಿನಲ್ಲಿನ ಚಿತ್ರವೂ ಸೇರಿದಂತೆ ರಿಶಿಯ ಸಿನಿ ಕೆರಿಯರ್ ಅದೇಕೋ ಥಂಡಾ ಹೊಡೆದಂತಿತ್ತು. ಹೀಗಿರುವಾಗಲೇ ಆತ ಹೊಸಾ ಚಿತ್ರವೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ!

ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಅವರ ಹೊಸಾ ಚಿತ್ರಕ್ಕೆ ರಿಶಿ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಚಿತ್ರಕ್ಕೆ ಭರತ ಬಾಹುಬಲಿ ಎಂಬ ಟೈಟಲ್ ಅನ್ನೂ ಫೈನಲ್ ಮಾಡಲಾಗಿದೆ. ಇದರ ಜೊತೆಗೇ ಸಾರಾ ಹರೀಶ್ ರಿಶಿಗೆ ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ!

 

ಶೀರ್ಷಿಕೆ, ನಾಯಕಿ ಸೇರಿದಂತೆ ಎಲ್ಲ ಆಯ್ಕೆಗಳೂ ಪೂರ್ಣಗೊಂಡಿರೋ ‘ಭರತ ಬಾಹುಬಲಿ’ ಮಂಜು ಮಾಂಡವ್ಯ ಸಾರಥ್ಯದಲ್ಲಿ ಇಷ್ಟರಲ್ಲಿಯೇ ಚಿತ್ರೀಕರಣಕ್ಕೆ ತೆರಳಲಿದ್ದಾನೆ. ಮಾಸ್ಟರ್ ಪೀಸ್ ನಂಥಾ ಹಿಟ್ ಚಿತ್ರ ಕೊಟ್ಟಿದ್ದ ಮಂಜು ಮಾಂಡವ್ಯ ಅವರ ಈ ಹೊಸ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಕಣ್ಣಿಟ್ಟು ಕಾಯುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ತನ್ನ ವಿಶಿಷ್ಟವಾದ ನಟನೆಯ ಮೂಲಕ ಗಮನ ಸೆಳೆದಿದ್ದ ರಿಶಿ ಈ ಮೂಲಕ ಮತ್ತೊಂದು ಹಿಟ್ ಚಿತ್ರ ಕೊಡುವ ಹುಮ್ಮಸ್ಸಿನಿಂದ ರೆಡಿಯಾಗುತ್ತಿದ್ದಾನೆ.

ಆದರೆ ಶಶಾಂಕ್ ಬ್ಯಾನರಿನ ಚಿತ್ರದ ಕಥೆ ಏನಾಯಿತೆಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಸದುದ್ದೇಶದಿಂದ ಶಶಾಂಕ್ ಸ್ವಂತ ಬ್ಯಾನರ್ ತೆರೆದಿದ್ದರಲ್ಲಾ? ಅದರಲ್ಲಿ ರಿಶಿ ನಾಯಕನಾಗಿರೋ ಒಂದು ಚಿತ್ರವನ್ನೂ ಘೋಷಣೆ ಮಾಡಲಾಗಿತ್ತು. ಆ ಚಿತ್ರವೂ ಬಂದರೆ ರಿಶಿ ಪಾಲಿಗೆ ಈ ವರ್ಷ ಡಬಲ್ ಧಮಾಕಾ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ!

Leave a Reply

Your email address will not be published. Required fields are marked *