Saturday, 17th August 2019

ಮೇ 23ರ ನಂತ್ರ ಕಾಂಗ್ರೆಸ್, ಜೆಡಿಎಸ್ ವಿಚ್ಛೇದನ ತೆಗೆದುಕೊಳ್ಳುತ್ತೆ – ರಾಜುಗೌಡ

ದಾವಣಗೆರೆ: ಕಾಂಗ್ರೆಸ್- ಜೆಡಿಎಸ್ ನವರ ಒಪ್ಪಂದ ಇರುವುದು ಮೇ 23 ರವರೆಗೆ ಮಾತ್ರ. ನಂತರ ಅವರೇ ವಿಚ್ಛೇದನ ತೆಗೆದುಕೊಳುತ್ತಾರೆ ಎಂದು ವೈತ್ರಿ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ರಾಜುಗೌಡ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪಾ ಎಂದರೆ, ಜನರ ಮಧ್ಯೆ ಇದ್ದೇನೆ ಎಂದು ಟ್ರೋಲ್ ಆಗಿತ್ತು. ಈಗ ನಿಖಿಲ್ ಎಲ್ಲಿದ್ದೀಯಪ್ಪಾ ಅಂದರೆ ಮಂಡ್ಯ ಜನ ಸೋಲಿಸುತ್ತಾರೆಂದು ಬೆಂಗಳೂರು ಮನೆಯಲ್ಲಿದ್ದೀನಪ್ಪಾ ಎಂದು ಟ್ರೋಲ್ ಆಗುತ್ತಿದೆ. ಮಂಡ್ಯದಲ್ಲಿ ನಿಖಿಲ್ ಸೋಲುವುದು ಪಕ್ಕಾ ಆಗಿದೆ. ನಿಖಿಲ್ ಜೊತೆ ದೇವೇಗೌಡ, ಪ್ರಜ್ವಲ್ ರೇವಣ್ಣ ಕೂಡ ಸೋಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಖ್ಯಮಂತ್ರಿಗಳು ನಮಗೆ ಗೋಡೆಯ ಮೇಲಿನ ಸುಣ್ಣವನ್ನು ತೋರಿಸಿ ಹಾಲು ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ ಸಿಎಂ ಆಗಿ ಮಾತನಾಡುತ್ತಾ ಇದ್ದಾರೋ ಅಥವಾ ನಿಖಿಲ್ ತಂದೆಯಾಗಿ ಮಾತನಾಡುತ್ತಾ ಇದ್ದಾರಾ ಎಂದು ಪ್ರಶ್ನಿಸಿದರು.

ಇದೇ ವೇಳೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿ ಇರುವುದಿಲ್ಲ ಎಂಬ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜುಗೌಡ ಅದು ಸತ್ಯ. ಯಡಿಯೂರಪ್ಪ ಸಿಎಂ ಆದ ಮೇಲೆ ಎರಡು ಹುದ್ದೆಯಲ್ಲಿ ಇರುವುದು ಕಷ್ಟ. ಹಾಗಾಗಿ ಶಾಮನೂರು ಶಿವಶಂಕರಪ್ಪ ಈ ರೀತಿ ಹೇಳಿದ್ದಾರೆ ಎಂದರು.

ಈ ಬಾರಿ ನಾವು 20, 22 ಸ್ಥಾನ ಗೆಲ್ಲುತ್ತೇವೆ. ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುವುದು ಸತ್ಯ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ. ರೋಗಿಗಳು ಜಾಸ್ತಿಯಾಗಿದ್ದಾರೆ, ಡಾಕ್ಟರ್ ಕಡಿಮೆಯಾಗಿದ್ದಾರೆ. ಹೀಗಾಗಿ ನಾವು ಆಸ್ಪತ್ರೆ ಬಂದ್ ಮಾಡಿದ್ದೇವೆ ಎಂದು ತಮಾಷೆಯಾಡಿದರು.

ಸರ್ಕಾರದ ಒಪ್ಪಂದ ಮೇ 23ರ ವರೆಗೆ ಮಾತ್ರ. ಆಮೇಲೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಬಂದ ಮೇಲೆ ಮಾತಾಡುತ್ತೇನೆ. ಬಳ್ಳಾರಿ ಶಾಸಕರು ಸೇರಿದಂತೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *