Sunday, 23rd February 2020

Recent News

ಸೆಮಿಫೈನಲ್‍ನಲ್ಲಿ ಮಿಥಾಲಿ ರಾಜ್ ಕೈಬಿಟ್ಟದಕ್ಕೆ ವಿಷಾದವಿಲ್ಲ: ಹರ್ಮನ್ ಪ್ರೀತ್ ಕೌರ್

ಆಂಟಿಗುವಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19.3 ಓವರ್ ಗಳಲ್ಲಿ 112 ರನ್ ಗಳಿಸಿತ್ತು. ಆದರೆ ಭಾರತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 17.2 ಓವರ್ ಗಳಲ್ಲೇ ಗುರಿ ತಲುಪಿ 8 ವಿಕೆಟ್ ಗಳ ಜಯ ಪಡೆಯಿತು. ಪಂದ್ಯದಲ್ಲಿ ಭಾರತದ ಸೃತಿ ಮಂದಣ್ಣ 33 ರನ್, ಜೆಮಿಯಾ 26 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗಳಿಸಿದ್ದರು.

ಟೂರ್ನಿಯ ಪ್ರಮುಖ ಪಂದ್ಯದಲ್ಲಿ ತಂಡ ಅನುಭವಿ ಆಟಗಾರ್ತಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಮಿಥಾಲಿರಾಜ್‍ರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿದಕ್ಕೆ ಯಾವುದೇ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.

ತಂಡದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕೆಲವು ಬಾರಿ ಅದರಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಬಾರಿ ಸೋಲುತ್ತೇವೆ. ಈ ಪಂದ್ಯ ನಮ್ಮ ಯುವ ಪಡೆಗೆ ಒಂದು ಪಾಠವಾಗಿದ್ದು, ಟೂರ್ನಿಯಲ್ಲಿ ತಂಡ ತೋರಿದ ಪ್ರದರ್ಶನಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದರು.

ಮಿಥಾಲಿ ರಾಜ್ ಭಾರತದ ಪರ ಟಿ20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಪುರುಷ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿ ವಿಶೇಷ ಸಾಧನೆ ನಿರ್ಮಿಸಿದ್ದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ 85 ಪಂದ್ಯಗಳ 80 ಇನ್ನಿಂಗ್ಸ್ ಗಳಿಂದ 2,283 ರನ್ ಗಳಿಸಿದ್ದಾರೆ.

ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿದೆ. ಆಸೀಸ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *