Connect with us

Karnataka

ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

Published

on

ನವದೆಹಲಿ: ಉತ್ತರ ಭಾರತದ 5 ರಾಜ್ಯಗಳಲ್ಲಿ ತಲೆನೋವಾಗಿರುವ ಮಿಡತೆಗಳು ಮಹಾರಾಷ್ಟ್ರದ ಮೂಲಕ ಕರ್ನಾಟಕಕ್ಕೂ ಕಾಡುವ ಆತಂಕ ಎದುರಾಗಿದೆ.

ರಾಜ್ಯದ ದಕ್ಷಿಣ ಭಾಗಕ್ಕೆ ಗಾಳಿ ಬೀಸಿದರೆ ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶಿಸಿ ವಿಜಯಪುರ, ಬೆಳಗಾವಿ ಸೇರಿದಂತೆ ಗಡಿ ಜಿಲ್ಲೆಗಳಿಗೂ ಮಿಡತೆಗಳು ವ್ಯಾಪಿಸುವ ಸಾಧ್ಯತೆಯಿದೆ.

ಈ ಮಿಡತೆಗಳು ಬೆಳೆದು ನಿಂತಿರುವ ಪೈರುಗಳನ್ನು ತಿನ್ನುತ್ತವೆ. ಗಾಳಿ ಯಾವ ಭಾಗಕ್ಕೆ ಹೆಚ್ಚು ಬೀಸುತ್ತದೆಯೋ ಆ ಭಾಗಕ್ಕೆ ಹಿಂಡುಹಿಂಡಾಗಿ ವಲಸೆ ಹೋಗುತ್ತವೆ. ದಿನಕ್ಕೆ 200ಕಿ.ಮೀಗೂ ಹೆಚ್ಚು ದೂರ ಸಾಗುವ ಸಾಮರ್ಥ್ಯ ಈ ಮಿಡತೆಗಳಿಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮಿಡತೆ ಹಾವಳಿ ಹೆಚ್ಚಿರುವ ಕಾರಣ ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿರುವ ಮಿಡತೆಗಳು ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಹರ್ಯಾಣ, ಗುಜರಾತ್ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೃಷಿ ತೋಟಕ್ಕೆ ನುಗ್ಗಿ ಬೆಳೆಯನ್ನು ಹಾನಿ ಮಾಡುತ್ತಿವೆ. ಈಗ ಮಹರಾಷ್ಟ್ರದ ವಿದರ್ಭ, ಅಮರಾವತಿ, ವರ್ಧಾ, ನಾಗಪುರ ಜಿಲ್ಲೆಗಳಲ್ಲಿ ದಾಳಿ ಮಾಡಿದೆ. ಈಗಾಗಲೇ ರೈತರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಬೆಳೆಗಳ ಮೇಲೆ ಕೀಟನಾಶಕ ಸಿಂಪಡಿಸಲು ಸೂಚನೆ ನೀಡಲಾಗಿದೆ.

ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ:
ಪ್ರತಿವರ್ಷ ಮಿಡತೆಗಳು ಪಾಕಿಸ್ತಾನ, ಇರಾನ್ ದಾಳಿ ಮಾಡುತ್ತಿರುತ್ತವೆ. ಮಿಡತೆ ಕಾಟ ತಡೆಯಲು ಪಾಕಿಸ್ತಾನ ತುರ್ತು ಪರಿಸ್ಥಿತಿಯನ್ನು ಪ್ರಕಟಿಸಿದೆ. ಮಿಡತೆಗಳಲ್ಲಿ ಹಲವು ಉಪಜಾತಿಗಳಿವೆ. ಅದರಲ್ಲೂ ಮರುಭೂಮಿ ಮಿಡತೆ ಭಾರೀ ಅಪಾಯಕಾರಿಯಾಗಿದ್ದು ಬೆಳೆಗಳನ್ನು ತಿನ್ನುತ್ತಾ ವಲಸೆ ಹೋಗುತ್ತವೆ.

ಪೂರಕ ವಾತವಾರಣ ಸಿಕ್ಕಿದಾಗ ಈ ಮರಭೂಮಿ ಮಿಡತೆಗಳು ಸಿಕ್ಕಾಪಟ್ಟೆ ಮೊಟ್ಟೆ ಇಡುತ್ತವೆ. ಕೇವಲ 1 ಚದರ ಮೀಟರ್ ನಲ್ಲಿ 5000 ಮೊಟ್ಟೆಗಳ ಕ್ಲಸ್ಟರ್ ಇಡುತ್ತದೆ. ಮರಿಯಾದ ನಂತರ ಆಹಾರ ಅರಸುತ್ತಾ ಹೋಗುವ ಮಿಡತೆಗಳು ಕೃಷಿ ಭೂಮಿಯಲ್ಲಿ ಪೈರುಗಳನ್ನು ನೋಡಿದ ಕೂಡಲೇ ಇಳಿಯುತ್ತವೆ. ಕೋಟಿ ಸಂಖ್ಯೆಯ ಮಿಡತೆಗಳು ಒಂದೇ ಬಾರಿ ಬೆಳೆಯನ್ನು ತಿಂದು ಮುಂದಕ್ಕೆ ಹೋಗುತ್ತವೆ.

ಜಾಗತಿಕ ತಾಪಮಾನ ಏರಿಕೆ ಅಥವಾ ಬಹಳ ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗಿ ವಾತಾವರಣದಲ್ಲಿ ಬದಲಾವಣೆಗಳಾದಾಗ ಈ ರೀತಿ ಮಿಡತೆಗಳ ದಾಳಿಯಾಗುತ್ತದೆ.