Tuesday, 16th July 2019

ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

ಶಿವಮೊಗ್ಗ: ಸಿಎಂ ಎಚ್‍ಡಿ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ಅವರ ಸರ್ಕಾರವನ್ನು ಬೀಳಿಸಿದರೆ ದೇವರು ಮೆಚ್ಚಲ್ಲ ಎಂದು ಆದಿಚುಂಚನಗಿರಿ ಮಠದ ಪೀಠದ್ಯಕ್ಷ ಡಾ. ನಿರ್ಮಲಾನಂದ ಶ್ರೀ ಹೇಳಿದ್ದಾರೆ.

ಮಲೆನಾಡು ಸೊಸೈಟಿ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಗಳು, ಒಂದು ವೇಳೆ ರಾಜ್ಯ ಸರ್ಕಾರವನ್ನು ಕೆಡವಿದರೆ ಅದು ದೇವರಿಗೆ ದ್ರೋಹ ಬಗೆದಂತೆ. 37 ಶಾಸಕರನ್ನ ಹೊಂದಿರುವ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ದೈವಾನುಗ್ರಹದಿಂದ ಮಾತ್ರ ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವಾಗಿದೆ ಎಂದು ಹೇಳಿದರು.

ರಾಜಕಾರಣದ ಕುರಿತು ಮಾತನಾಡಲು ನನಗೆ ಇಷ್ಟವಿಲ್ಲ ಆದರೆ ಕೆಲ ಅಂಶಗಳನ್ನು ತಿಳಿಸುತ್ತೆನೆ. ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 37 ಶಾಸಕರನ್ನು ಹೊಂದಿರುವ ವ್ಯಕ್ತಿ ಸರ್ಕಾರ ಮಾಡುವುದು ಸಾಮಾನ್ಯ ಕೆಲಸವಲ್ಲ. ಅವರಿಗೆ ದೈವದ ಶಕ್ತಿ ಇದೆ. ಅವರ ಕಾರ್ಯ ನಮಗೇ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು, ಕೇವಲ 37 ಜನ ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವಂತ ಸ್ಥೈರ್ಯ ತೋರಿದ್ದಾರೆ. ಇದನ್ನು ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಹೇಳುತ್ತಿಲ್ಲ, ಅವರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಹೇಳುತ್ತಿದ್ದೇನೆ. ಆದರೆ ರಾಜ್ಯದ ಒಂದು ಸಮುದಾಯ ಸರ್ಕಾರ ಹೋಗಲಿ ಎಂದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ನಿರಾಶರಾಗಲಿದ್ದಾರೆ. ಮೈತ್ರಿ ಸರ್ಕಾರಲ್ಲಿ ಸಣ್ಣ ಪುಟ್ಟ ದೋಷಗಳಿವೆ ಆದರೆ, ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದರು.

Leave a Reply

Your email address will not be published. Required fields are marked *