Connect with us

Cinema

ಕನ್ನಡ ನಟರ ನಂತ್ರ ಸೂಪರ್‌ಸ್ಟಾರ್ ಬಳಿ ಸಹಾಯ ಕೇಳಿದ ವಿಜಯಲಕ್ಷ್ಮಿ

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ತಾವು ಕಷ್ಟದಲ್ಲಿ ಇರುವುದಾಗಿ ಹೇಳಿ ಕಲಾವಿದರ ಬಳಿ ಸಹಾಯ ಕೇಳಿದ್ದರು. ಈಗ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಳಿ ಸಹಾಯ ಕೇಳಿದ್ದಾರೆ.

ವಿಜಯಲಕ್ಷ್ಮಿ ಅವರು ವಿಡಿಯೋವೊಂದರಲ್ಲಿ, ನನ್ನ ತಾಯಿ ಹಾಗೂ ಸಹೋದರಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಿ ನನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆದರೆ ವಿಜಯಲಕ್ಷ್ಮಿ ತಮಗೆ ಏನೂ ಸಮಸ್ಯೆ ಇದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿಲ್ಲ.

ಈ ಮೊದಲು ವಿಜಯಲಕ್ಷ್ಮಿ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಸ್ಯಾಂಡಲ್‍ವುಡ್ ನಟರ ಬಳಿ ಸಹಾಯ ಕೇಳಿದ್ದರು. ಈ ವೇಳೆ ನಟ ಕಿಚ್ಚ ಸುದೀಪ್, ರವಿ ಪ್ರಕಾಶ್, ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವು ಕಲಾವಿದರು ವಿಜಯಲಕ್ಷ್ಮಿ ಅವರ ಚಿಕಿತ್ಸೆಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದರು.

ಅಲ್ಲದೆ ವಿಜಯಲಕ್ಷ್ಮಿ ಅವರು ನಟ ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನಟ ರವಿಪ್ರಕಾಶ್ ವಿರುದ್ಧ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರವಿಪ್ರಕಾಶ್ ವಿರುದ್ಧ ದೂರು ದಾಖಲಿಸಿದ್ದರು.

ಈಗ ಈ ವಿಡಿಯೋದಲ್ಲಿ ವಿಜಯಲಕ್ಷ್ಮಿ ಅವರು, “ರಜನಿಕಾಂತ್ ಅವರು ನನ್ನ ಕೊನೆಯ ಭರವಸೆ. ನನ್ನ ಮನವಿಯನ್ನು ರಜನಿಕಾಂತ್ ಬಳಿ ಹೇಳುವಂತೆ ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಹತಾಶೆಯಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ ರಜನಿಕಾಂತ್ ನನ್ನ ಮನವಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.