Tuesday, 16th July 2019

ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

ಕೋಲ್ಕತ್ತಾ: ಕ್ಯಾಬ್‍ನಿಂದ ಹೊರ ಎಳೆದು ಚಾಲಕನೊಬ್ಬ ಬಂಗಾಲಿ ಕಿರುತೆರೆ ನಟಿಗೆ ಬೆದರಿಕೆ ಹಾಕಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಸ್ವಸ್ತಿಕ ದತ್ತ ಬೆಂಗಾಲಿಯ ಖ್ಯಾತ ಕಿರುತೆರೆ ನಟಿಯಾಗಿದ್ದು, ಬುಧವಾರ ಚಿತ್ರೀಕರಣಕ್ಕಾಗಿ ಕ್ಯಾಬ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಜಮ್‍ಶೇದ್ ಏಕಾಏಕಿ ಕಾರ್ ನಿಲ್ಲಿಸಿ ನಟಿಗೆ ಇಳಿಯುವಂತೆ ಹೇಳಿದ್ದಾನೆ. ಇದಕ್ಕೆ ನಟಿ ಒಪ್ಪದಿದ್ದಕ್ಕೆ ಆಕೆಯನ್ನು ಎಳೆದು ಹೊರ ಹಾಕಿದ್ದಾನೆ. ಸ್ವಸ್ತಿಕ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಚಾಲಕ ಫೋಟೋ, ಆತನ ಫೋನ್ ನಂಬರ್ ಹಾಗೂ ಕಾರಿನ ನಂಬರ್ ಹಾಕಿ ಘಟನೆಯ ಬಗ್ಗೆ ವಿವರಿಸಿ ಪೋಸ್ಟ್ ಪ್ರಕಟಿಸಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಬುಧವಾರ ಕೋಲ್ಕತ್ತಾದ ರಾನಿಯಾದಲ್ಲಿ ಶೂಟಿಂಗ್‍ಗೆ ಹೋಗಲು ನಾನು ಕ್ಯಾಬ್ ಬುಕ್ ಮಾಡಿದೆ. ಬಳಿಕ ಕ್ಯಾಬ್‍ನಲ್ಲಿ ಹೋಗುತ್ತಿದ್ದಾಗ ಚಾಲಕ ನಡುರಸ್ತೆಯಲ್ಲಿ ನನ್ನ ಪ್ರಯಾಣವನ್ನು ಕ್ಯಾನ್ಸಲ್ ಮಾಡಿ ಕಾರಿನಿಂದ ಇಳಿಯಲು ಹೇಳಿದ. ಆದರೆ ನಾನು ಕಾರಿನಿಂದ ಇಳಿಯಲು ಒಪ್ಪಲಿಲ್ಲ. ಆಗ ಚಾಲಕ ಕಾರಿನಲ್ಲಿ ತನ್ನ ಏರಿಯಾ ಕಡೆ ನನಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾನೆ. ಅಲ್ಲದೆ ಆತ ಕಾರಿನಿಂದ ಇಳಿದು ಡೋರ್ ಓಪನ್ ಮಾಡಿ ನನ್ನನ್ನು ಹೊರ ಎಳೆದಿದ್ದಾನೆ. ಇದರಿಂದ ಕೋಪಗೊಂಡು ನಾನು ಹೆಲ್ಪ್ ಮೀ ಎಂದು ಕಿರುಚಲು ಶುರು ಮಾಡಿದೆ. ಆಗ ಚಾಲಕ ನನಗೆ ಬೆದರಿಕೆ ಹಾಕಿ ತನ್ನ ಹುಡುಗರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಚಾಲಕ ಬೆಂಗಾಲಿಯಲ್ಲಿ, “ನಿನಗೆ ಏನೂ ಬೇಕು ಅದನ್ನು ನೀನು ಮಾಡ್ಕೋ. ನೀನು ಏನೂ ಮಾಡುತ್ತೀಯಾ ಎಂದು ನಾನು ನೋಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ನಾನು ಶೂಟಿಂಗ್‍ಗೆ ಲೇಟ್ ಹೋಗಿದ್ದೆ. ಅಲ್ಲದೆ ನನ್ನ ತಂಡ ನನಗಾಗಿ ಕಾಯುತಿತ್ತು. ಹಾಗಾಗಿ ನಾನು ಸ್ಥಳದಿಂದ ಶೂಟಿಂಗ್ ಸೆಟ್‍ಗೆ ಹೋದೆ. ಬಳಿಕ ನನ್ನ ತಂದೆಗೆ ಈ ವಿಷಯವನ್ನು ತಿಳಿಸಿದೆ. ಅವರು ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ” ಎಂದು ನಟಿ ಸ್ವಸ್ತಿಕ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 8.15ಕ್ಕೆ ಶುರುವಾದ ಜಗಳ 8.45 ವರೆಗೂ ನಡೆದಿದೆ. ಈ ಘಟನೆ ಕೋಲ್ಕತ್ತಾದ ಇಎಂ ಬೈಪಾಸ್‍ನ ರೆಸ್ಟೋರೆಂಟ್ ಮುಂಭಾಗದಲ್ಲಿ ನಡೆದಿದೆ ಎಂದು ನಟಿ ಸ್ವಸ್ತಿಕ ದತ್ತ ಹೇಳಿದ್ದಾರೆ.

Leave a Reply

Your email address will not be published. Required fields are marked *