Connect with us

Cinema

ಕೊಡಗಿನಿಂದ ಮಹೇಶ್ ಬಾಬುಗೆ ಉಡುಗೊರೆ ಕಳುಹಿಸಿದ ರಶ್ಮಿಕಾ

Published

on

ಹೈದರಾಬಾದ್: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊಡಗಿನ ಕೂರ್ಗ್‌ನಲ್ಲಿ ಕುಟುಂಬದವರ ಜೊತೆ ಕಾಲಕಳೆಯುತ್ತಿದ್ದಾರೆ. ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುಟುಂಬಕ್ಕೆ ಕೊಡಗಿನಿಂದ ವಿಶೇಷವಾದ ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ.

ನಟಿ ರಶ್ಮಿಕಾ ಮಾವಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಆರ್ಗಾನಿಕ್ ಫುಡ್‍ಗಳನ್ನು ಉಡುಗೊರೆಯಾಗಿ ಮಹೇಶ್ ಬಾಬು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಕೊಡಗಿನಿಂದ ಅದರಲ್ಲೂ ಮಳೆಗಾಲದಲ್ಲಿ ಉಡುಗೊರೆ ಕಳುಹಿಸಿಕೊಟ್ಟಿದ್ದಕ್ಕೆ ನಟ ಮಹೇಶ್ ಬಾಬು ಪತ್ನಿ ನಮ್ರತಾ ಅವರು ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ.

ರಶ್ಮಿಕಾ ತಮ್ಮದೆ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಗಿಫ್ಟಾಗಿ ನೀಡಿದ್ದಾರೆ. ರಶ್ಮಿಕಾ ಕಳುಹಿಸಿದ್ದ ಉಡುಗೊರೆಯ ಫೋಟೋವನ್ನು ನಮ್ರತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ “ಈ ಎಲ್ಲಾ ರುಚಿಕರವಾದ ತಿನಿಸುಗಳನ್ನು ಕಳುಹಿಸಿಕೊಟ್ಟ ರಶ್ಮಿಕಾಗೆ ಧನ್ಯವಾದಗಳು. ಇದೆಲ್ಲ ಕೂರ್ಗ್‌ನಿಂದ ಬಂದಿದೆ. ಕೊರೊನಾ ಸಮಯದಲ್ಲಿ ನಮ್ಮ ಮನೆಗೆ ಮೊದಲ ಉಡುಗೊರೆ ಇದಾಗಿದೆ. ಹ್ಯಾಪಿ ಮಳೆಗಾಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಉಡುಗೊರೆ ಜೊತೆ ರಶ್ಮಿಕಾ ಬರೆದಿರುವ ಪತ್ರ ಇರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ನಟಿ ರಶ್ಮಿಕಾ ಮತ್ತು ಮಹೇಶ್ ಬಾಬು ‘ಸರಿಲೇರು ನಿಕೆವ್ವರು’ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಈ ಸಿನಿಮಾದ ಮೂಲಕ ಮಹೇಶ್ ಬಾಬು ಕುಟಂಬದ ಜೊತೆ ರಶ್ಮಿಕಾ ಉತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಸಿನಿಮಾ ನಂತರವೂ ಇದೇ ಬಾಂಧವ್ಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕೊಡಗಿನಿಂದ ಹಣ್ಣುಗಳನ್ನು ಮಹೇಶ್ ಬಾಬು ಕುಟುಂಬಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಸದ್ಯಕ್ಕೆ ರಶ್ಮಿಕಾ ಸದ್ಯ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿಯೂ ತೆರೆಗೆ ಬರುತ್ತಿದೆ.