Sunday, 25th August 2019

`ನಾ ಅಲ್ಲಿಗೆ ಬರಲ್ಲ’ ಎಂದಿದ್ದಕ್ಕೆ ಸಿನಿಮಾದಿಂದ ನಟಿಗೆ ಗೇಟ್‍ಪಾಸ್-ಕನ್ನಡ ಕಲಾವಿದೆ ಬಿಚ್ಚಿಟ್ಟ ಸ್ಫೋಟಕ ಸತ್ಯ !

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಬೇಕು ಅಂದರೆ ಬೆಳ್ಳಿ ಮಂಚ ಏರಬೇಕು. ತನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಜತೆಗೆ ತನ್ನನ್ನ ರಂಭೆಯಂತೆ ತೋರಿಸುವ ಕ್ಯಾಮೆರಾಮ್ಯಾನ್‍ಗೂ ಕೂಡ ಸಹಕರಿಸಬೇಕಂತೆ ಅನ್ನೋ ವಿಷ್ಯವನ್ನ ಇಷ್ಟು ದಿನ ನಾವೆಲ್ಲರೂ ಕೇಳಿದ್ದೇವೆ. ಅದಕ್ಕೆ ಸಾಕ್ಷಿಯೆಂಬಂತೆ ಚಂದನವನದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಬಿಗ್‍ಬಾಸ್ ಮೂಲಕವೇ ಹೆಸರು ಪಡೆದುಕೊಂಡಿದ್ದ ನಟಿ ಜಯಶ್ರೀ ರಾಮಯ್ಯ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬಾನೇ ಚೂಸಿಯಾಗಿರುವ ಜಯಶ್ರೀ, ‘ಉಪ್ಪು ಹುಳಿ ಖಾರ’ ಸಿನಿಮಾ ನಂತರ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗಿ ಸುದ್ದಿಯಾಗಿದ್ದರು. ಇದೀಗ ಚಿತ್ರತಂಡದಿಂದ ಗೇಟ್‍ಪಾಸ್ ಪಡೆದುಕೊಂಡಿರುವ ಜಯಶ್ರೀ, ಪಬ್ಲಿಕ್ ಟಿವಿ ಜತೆ ಮಾತನಾಡುತ್ತಾ ಭಯಾನಕ ಸುದ್ದಿಯೊಂದನ್ನ ಸ್ಫೋಟಿಸಿದ್ದಾರೆ.

ನಿರ್ದೇಶಕ ಮಂಜು ಹೆದ್ದೂರ್ ನಮ್ಮ ಸಿನಿಮಾಗೆ ಪಕ್ಕಾ ಸೂಟ್ ಆಗ್ತೀಯಾ ನೀನು’ ಅಂತ ಎರಡು ದಿನ ಶೂಟಿಂಗ್ ಮಾಡಿದರು. ವೆರೈಟಿ ಕಾಸ್ಟ್ಯೂಮ್ಸ್ ಹಾಕಿ ಶೂಟ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನಾಯಕಿ ಜಯಶ್ರೀ ಅವರಿಗೆ ಗೇಟ್‍ಪಾಸ್ ನೀಡಿದ್ದಾರೆ. ಡ್ಯಾನ್ಸ್ ಕೊರಿಯಾಗ್ರಫರ್ ಮೂಲಕ ಜಯಶ್ರೀಗೆ ಮಂಜು ಹೆದ್ದೂರ್ ಪರಿಚಯವಾಗುತ್ತೆ, ಮೊದಲ ಮೀಟಿಂಗ್‍ನಲ್ಲೇ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗ್ತಾರೆ. ಸಿನಿಮಾ ವಿಷಯವಾಗಿ ಮಾತನಾಡಬೇಕು ಅಂತ ನಿರ್ದೇಶಕ ಮಂಜು ಹೆದ್ದೂರ್ ಪದೇ ಪದೇ ಅಲ್ಲಿ ಇಲ್ಲಿ ಬರುವಂತೆ ಕೇಳಿಕೊಳ್ತಾರೆ. ಮೊದಲು ಡ್ರಿಂಕ್ಸ್ ಪಾರ್ಟಿ, ಅನಂತರ ಲಾಂಗ್ ಡ್ರೈವ್ ಹೀಗೆ ಒಂದಿಲ್ಲೊಂದು ಬೇಡಿಕೆಯನ್ನ ಜಯಶ್ರೀ ಮುಂದೆ ಇಡುತ್ತಾರೆ. ಆದ್ರೆ ಜಯಶ್ರೀ ಎಂದು ನಿರ್ದೇಶಕರ ಮಾತಿಗೆ ಒಪ್ಪಿಗೆ ಸೂಚಿಸಿಲ್ಲ.

ಯಾವಾಗ ತಾನು ಎಲ್ಲಿಗೆ ಕರೆದರೂ ಬರಲಿಲ್ಲವೋ ಆಗಲೇ ಜಯಶ್ರೀಯನ್ನ ತಮ್ಮ ಸಿನಿಮಾದಿಂದ ಹೊರಕಳಿಸೋದಕ್ಕೆ ಪ್ಲ್ಯಾನ್ ಮಾಡಿದ್ರು ನಿರ್ದೆಶಕ. ರೀಸನ್ ಇಲ್ಲದೇ ಆಕೆಗೆ ಗೇಟ್‍ಪಾಸ್ ನೀಡೋದಕ್ಕೆ ಅಸಾಧ್ಯ ಅಂತ ತಿಳಿದು ನಿರ್ಮಾಪಕರು ಬದಲಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಸ್ಟಾಪ್ ಮಾಡ್ತೀವಿ ಮುಂದೆ ನೋಡೋಣ ಅಂತ ಕಥೆ ಹೇಳಿದ್ದಾರೆ. ನಿರ್ದೇಶಕ ಮಂಜು ಹೆದ್ದೂರ್ ಇದಾಗಿ ಮರುದಿನವೇ ಬೇರೊಬ್ಬ ನಾಯಕಿಯನ್ನ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದು ಜಯಶ್ರೀ ಆರೋಪಿಸುತ್ತಿದ್ದಾರೆ.

ತನಗಾದ ಅನ್ಯಾಯ ಬೇರಾವ ನಟಿಗೂ ಆಗಬಾರದು ಅಂತ ಜಯಶ್ರೀ ಫಿಲ್ಮ್ ಚೇಂಬರ್‍ಗೆ ದೂರು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಜಯಶ್ರೀಯವರನ್ನ ನಿರ್ದೇಶಕ ಮಂಜು ಹೆದ್ದೂರ್, ಪಾರ್ಟಿ, ಲಾಂಗ್‍ಡ್ರೈವ್ ಕರೆದಿದ್ದು ಯಾವ ಕಾರಣಕ್ಕೆ ? ಕತೆ ಬಗ್ಗೆ ಚರ್ಚೆ ಮಾಡಲಿಕ್ಕಾ ಅಥವಾ ಬೇರಾವ ಕಾರಣಕ್ಕಾ ? ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ನಟಿ ಜಯಶ್ರೀ ಹೇಳುವ ಪ್ರಕಾರ, ಲೇಟ್‍ನೈಟ್ ಕಾಲ್ ಮಾಡಿ ಪರ್ಫಾಮೆನ್ಸ್ ವಿಡಿಯೋ ಕಳುಹಿಸುವಂತೆ ಕೇಳಿದ್ರು, ನಾನ್ ಕಳುಹಿಸಿರಲಿಲ್ಲ.. ಇದೀಗ ಅದನ್ನೇ ನೆಪವನ್ನಾಗಿಸಿಕೊಂಡು ನನ್ನನ್ನ ಚಿತ್ರತಂಡದಿಂದ ಹೊರಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *