Friday, 13th December 2019

ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ನಿಶ್ಚಿತಾರ್ಥ

– ರೆಡ್ ರೋಸ್ ಕೊಟ್ಟು ಕುಟುಂಬದ ಮುಂದೆ ಪ್ರಪೋಸ್

ಬೆಂಗಳೂರು: ಇಂದು ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಮತ್ತು ನಟ ಕಿರಣ್ ಶ್ರೀನಿವಾಸ್ ಅವರ ನಿಶ್ಚಿತಾರ್ಥ ನಗರದಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಕಿರಣ್ ಹಾಗೂ ಹಿತಾ ಚಂದ್ರಶೇಖರ್ ಅವರು ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಾಯಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಮದು ಮಕ್ಕಳಂತೆ ರೆಡಿಯಾಗಿದ್ದು, ಮುದ್ದು-ಮುದ್ದಾಗಿ ಕಾಣಿಸುತ್ತಿದ್ದರು. ಇದೇ ವೇಳೆ ಕಿರಣ್ ಮತ್ತು ಹಿತಾ ಅವರು ಪರಸ್ಪರ ರೆಡ್ ರೋಸ್ ಕೊಟ್ಟು ಕುಟುಂಬದವರ ಮುಂದೆಯೇ ಪ್ರಪೋಸ್ ಮಾಡಿದ್ದಾರೆ.

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ಕುಟುಂಬದವರು ಮತ್ತು ಸಂಬಂಧಿಕರು, ಸ್ನೇಹಿತಯರು ಭಾಗವಹಿಸಿದ್ದು, ನವಜೋಡಿಗೆ ಶುಭಕೋರಿದ್ದಾರೆ. ಈ ಹಿಂದೆಯೇ ಹಿತಾ ತಾವೂ ಕಿರಣ್ ಅವರನ್ನು ಪ್ರೀತಿಸುತ್ತಿದ್ದ ಬಗ್ಗೆ ಮತ್ತು ಇನ್ನೂ ಎರಡು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೊಂಡಿದ್ದರು.

ಕಿರಣ್, ನಾನು ಮತ್ತು ಸೋನು `ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದೆವು. ಈ ಸಿನಿಮಾದ ಮೂಲಕ ಕಿರಣ್ ಪರಿಚಯವಾಗಿದ್ದು, ಆದರೆ ಕಿರಣ್ ನಮ್ಮ ಕುಟುಂಬದವರಿಗೆ ಪರಿಚಯವಿದ್ದಾರೆ. ಎರಡು ಕುಟುಂಬದವರ ನಡುವೆ ಉತ್ತಮ ಒಡನಾಟವಿದೆ. ಕಿರಣ್, ನಾನು ಮೊದಲಿಗೆ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಸುತ್ತಿದ್ದೆವು. ಇತ್ತೀಚೆಗಷ್ಟೆ ಇಬ್ಬರು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ. ನಮ್ಮ ಪ್ರೀತಿಯ ವಿಚಾರವನ್ನು ಎರಡು ಕುಟುಂಬದವರಿಗೂ ತಿಳಿಸಿದಾಗ ಅವರು ಕೂಡ ಸಂತೋಷದಿಂದ ಒಪ್ಪಿಕೊಂಡಿದ್ದಾರೆಸ ಎಂದು ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು.

ಕಿರಣ್ 2008ರಲ್ಲಿ `ಹಾಗೇ ಸುಮ್ಮನೆ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸಿದ್ದು, `ಚಿರು’, `ಮುಗಿಲ ಮಲ್ಲಿಗೆಯೋ’, `ಕಾಂಚನಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಿರಣ್ ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ತಮ್ಮ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ಹಿತಾ ಚಂದ್ರಶೇಖರ್ 2016ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಡಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ನಂತರ `ಕಾಲ್ ಕೆಜಿ ಪ್ರೀತಿ’ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಇದೀಗ ‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *