Thursday, 20th February 2020

Recent News

ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವು ಆಲಿಸಿದ ನೀನಾಸಂ ಸತೀಶ್

ಗದಗ: ಈ ಬಾರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹ ತತ್ತರಿಸಿವೆ. ರಕ್ಕಸ ಪ್ರವಾಹದಲ್ಲಿ ಜೀವವನ್ನೇ ಉಳಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿದ ಜನರ ಬದುಕು ಅಕ್ಷರಶಃ ಅಂಧಕಾರವಾಗಿದೆ. ಬದುಕಿನ ಬಂಡಿಗೆ ಆಸರೆಯಾಗಿದ್ದ ಜಮೀನು, ತೋಟ, ಜಾನುವಾರುಗಳು ಎಲ್ಲವನ್ನು ನದಿ ಆಹುತಿ ತೆಗೆದುಕೊಂಡಿದೆ. ಪ್ರವಾಹ ತಗ್ಗಿದ್ದು ನಿರಾಶ್ರಿತರು ಗ್ರಾಮಗಳತ್ತ ತೆರಳುತ್ತಿದ್ದು, ತಮ್ಮ ಮನೆಯ ಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ನಿರಾಶ್ರಿತರ ಸಹಾಯಕ್ಕೆ ಇಡೀ ಕರುನಾಡು ಮುಂದಾಗಿದೆ. ಸ್ಟಾರ್ ಕಲಾವಿದರು ಸಹ ತಮ್ಮ ಶಕ್ತಿಗನುಗುಣವಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇಂದು ಲೂಸಿಯಾ ಖ್ಯಾತಿಯ ನಟ ನೀನಾಸಂ ಸತೀಶ್ ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಸಂತ್ರಸ್ತರ ನೋವು ಆಲಿಸಿದರು.

ಗದಗ ಜಿಲ್ಲೆಯ ಹೊಳೆ ಹೊನ್ನೂರು ಗ್ರಾಮಕ್ಕೆ ಸತೀಶ್ ಮತ್ತು ಅವರ ತಂಡ ಭೇಟಿ ನೀಡಿತ್ತು. ಗ್ರಾಮದ ಪ್ರತಿ ಮನೆಗಳಿಗೂ ತೆರಳಿದ್ದ ಸತೀಶ್ ಎಲ್ಲರ ನೋವನ್ನು ಆಲಿಸಿ, ಪ್ರವಾಹ ಪರಿಣಾಮವನ್ನು ಅರಿತರು. ಹಾಗೆಯೇ ಕೆಲ ದಿನಬಳಕೆ ವಸ್ತುಗಳನ್ನು ನೀಡಿ ನಿರಾಶ್ರಿತರಿಗೆ ಸಹಾಯವಾದರು. ಪ್ರತಿ ಮನೆಗೆ ಭೇಟಿ ನೀಡಿದ ಸತೀಶ್ ತಾವು ಅದೇ ಗ್ರಾಮದ ನಿವಾಸಿ ಎಂಬಂತೆ ಗ್ರಾಮಸ್ಥರೊಂದಿಗೆ ಬೆರೆತಿದ್ದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವು ಕಲಾವಿದರ ಪ್ರವಾಹ ಪೀಡಿತರ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಾಜ್ಯದ ಮಠಗಳು, ದೇವಸ್ಥಾನ, ಸಂಘ ಸಂಸ್ಥೆಗಳು ಸಹ ನಿರಾಶ್ರಿತರ ಸಹಾಯಕ್ಕೆ ಮುಂದಾಗಿವೆ.

Leave a Reply

Your email address will not be published. Required fields are marked *