Connect with us

Bengaluru City

‘ಮ್ಯಾಟ್ನಿ’ ಫಸ್ಟ್ ಲುಕ್: ನೀನಾಸಂ ಸತೀಶ್ ಸಿನಿಮಾ ಸುಗ್ಗಿ ಶುರು!

Published

on

ನೀನಾಸಂ ಸತೀಶ್ ಎಂಬ ಹೆಸರು ಕೇಳಿದಾಕ್ಷಣವೇ ಥರ ಥರದ ಪಾತ್ರಗಳು ಕಣ್ಣೆದುರು ಸರಿಯಲಾರಂಭಿಸುತ್ತವೆ. ಸಣ್ಣ ಪುಟ್ಟ ಪಾತ್ರಗಳನ್ನೂ ಕೂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ನಾಯಕ ನಟನಾಗಿ ಮಿಂಚುತ್ತಿರೋ ಸತೀಶ್ ಈಗ ಹೊಸ ಹುರುಪಿನೊಂದಿಗೆ ಮತ್ತೊಂದಷ್ಟು ಸಿನಿಮಾಗಳಿಗಾಗಿ ಕಸರತ್ತು ಆರಂಭಿಸಿದ್ದಾರೆ. ಅದರ ಭಾಗವಾಗಿ ಈಗ ಸತೀಶ್ ಅಭಿನಯಿಸಲಿರೋ ‘ಮ್ಯಾಟ್ನಿ’ ಚಿತ್ರದ ಫಸ್ಟ್ ಲುಕ್ ಲಾಂಚ್ ಆಗಿದೆ.

ಇದು ಕೊರೊನಾ ಕಾಲದಲ್ಲಿ ನೀನಾಸಂ ಸತೀಶ್ ಅಭಿಮಾನಿ ಬಳಗಕ್ಕೆ ಸಿಕ್ಕ ಬಂಪರ್ ಗಿಫ್ಟ್‍ನಂಥಾ ಫಸ್ಟ್ ಲುಕ್. ಇದೀಗ ಬಿಡುಗಡೆಗೊಂಡಿರೋ ಫಸ್ಟ್ ಲುಕ್, ಈ ಸಿನಿಮಾವೊಂದು ಬೆಸ್ಟ್ ಕಥೆಯನ್ನೊಳಗೊಂಡಿದೆ ಅನ್ನೋದನ್ನ ಸಾರಿ ಹೇಳುವಂತಿದೆ. ಇತ್ತೀಚಿನ ದಿನಗಳಲ್ಲಿ ಸತೀಶ್ ಅವರು ಹೊಸ ಸಾಧ್ಯತೆಗಳತ್ತ ಕೈಚಾಚುತ್ತಿದ್ದಾರೆ. ಇದುವರೆಗೆ ಬಲಗೊಂಡಿರೋ ಇಮೇಜಿನಾಚೆಯ ಸವಾಲಿನ ಪಾತ್ರಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ಮ್ಯಾಟ್ನಿ ಚಿತ್ರದ ಮೂಲಕ ಅವರು ಮತ್ತೊಂದು ಬಗೆಯಲ್ಲಿ, ವಿಶಿಷ್ಟವಾದ ಗೆಟಪ್ಪಿನಲ್ಲಿ ಚೆಂದದ ಕಥೆಯ ಚುಂಗು ಹಿಡಿದು ಪ್ರೇಕ್ಷಕರನ್ನು ಮುಖಾಮುಖಿಯಾಗೋ ತವಕದಲ್ಲಿದ್ದಾರೆ.

ಮ್ಯಾಟ್ನಿ ಮನೋಹರ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರ. ಮನೋಹರ್ ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸಿರುವವರು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಬಳಿ ಕಸುಬು ಕಲಿತಿರೋ ಮನೋಹರ್ ಅದ್ಭುತವಾದ ಕಥೆಯೊಂದಿಗೆ ಮ್ಯಾಟ್ನಿಯನ್ನು ರೂಪಿಸಲು ಮುಂದಾಗಿದ್ದಾರಂತೆ. ಈ ಕಾರಣದಿಂದಲೇ ಮ್ಯಾಟ್ನಿ ಬಗ್ಗೆ ಸತೀಶ್ ಅವರಲ್ಲಿ ಗಾಢವಾದ ಭರವಸೆ ಇದೆ. ಅದಕ್ಕೆ ತಕ್ಕುದಾದಂಥ ನಿರೀಕ್ಷೆಗಳೂ ಇವೆ.

ವಿಶೇಷ ಅಂದ್ರೆ, ಈ ಸಿನಿಮಾ ಮೂಲಕ ರಚಿತಾ ರಾಮ್ ಮತ್ತು ಸತೀಶ್ ಮತ್ತೊಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ. ಈಗಾಗಲೇ ಒಟ್ಟಾಗಿ ನಟಿಸಿ ಒಂದು ಸುತ್ತು ಗೆದ್ದಿರುವ ರಚಿತಾ ಮತ್ತು ಸತೀಶ್ ಜೋಡಿ ಪ್ರೇಕ್ಷಕರ ಪಾಲಿನ ಹಾಟ್ ಫೇವರಿಟ್ ಅನ್ನಿಸಿಕೊಂಡಿತ್ತು. ಇದೀಗ ಆ ಜೋಡಿ ಮ್ಯಾಟ್ನಿ ಮೂಲಕ ಮತ್ತೆ ಒಂದಾಗಿದೆ. ಸತೀಶ್ ಅವರೇ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿರೋ ಅಂಶಗಳನ್ನು ಆಧರಿಸಿ ಹೇಳೋದಾದರೆ, ಮ್ಯಾಟ್ನಿಯಲ್ಲಿ ಇವರಿಬ್ಬರ ಪಾತ್ರವೂ ಭಿನ್ನವಾಗಿವೆಯಂತೆ. ಇಬ್ಬರೂ ಕೂಡ ಹೊಸ ಥರದ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರೋ ಭರವಸೆ ಸತೀಶ್ ಅವರಲ್ಲಿದೆ.

ಇದೀಗ ಫಸ್ಟ್ ಲುಕ್ ಮೂಲಕ ಸುದ್ದಿ ಕೇಂದ್ರದಲ್ಲಿರೋ ಮ್ಯಾಟ್ನಿಗೆ ಈ ತಿಂಗಳ ಕೊನೆಯ ಹೊತ್ತಿಗೆಲ್ಲ ಚಿತ್ರೀಕರಣ ನಡೆಯಲಿದೆ. ಹಾಗಂತ ಸತೀಶ್ ಅವರ ಬಳಿಯಿರೋದು ಇದೊಂದು ಚಿತ್ರ ಮಾತ್ರ ಅಂದುಕೊಳ್ಳಬೇಕಿಲ್ಲ. ಚಿತ್ರೀಕರಣದ ಹಂತದಲ್ಲಿರೋ ದಸರಾ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ. ಅದರ ಎರಡನೇ ಹಂತದ ಚಿತ್ರೀಕರಣ ಕೂಡಾ ಈ ತಿಂಗಳು ನಡೆಯಲಿದೆಯಂತೆ.

ಇದು ಸತೀಶ್ ಅವರ ಮುಂಬರೋ ಪ್ರಾಜೆಕ್ಟುಗಳ ವಿವರ. ಇನ್ನುಳಿದಂತೆ ಅವರು ನಾಯಕನಾಗಿ ನಟಿಸಿರುವ ಗೋದ್ರಾ ಬಿಡುಗಡೆಗೆ ರೆಡಿಯಾಗಿದೆ. ಇನ್ನೇನು ಕೊರೊನಾ ಕಾಟ ಮುಕ್ತಾಯವಾಗುತ್ತಲೇ, ತಿಂಗಳೊಪ್ಪತ್ತಿನಲ್ಲಿಯೇ ಈ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗೋ ಸಾಧ್ಯತೆಗಳಿವೆ. ನೀನಾಸಂ ಸತೀಶ್ ಪಾಲಿಗೆ ಅದು ಮತ್ತೊಂದು ಟರ್ನಿಂಗ್ ಪಾಯಿಂಟ್ ಆಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

ಈ ಹಿಂದೆ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ನಟಿಸಿದ್ದರಲ್ಲಾ? ಅದರಲ್ಲಿ ಅವರ ಇಮೇಜ್ ಸಂಪೂರ್ಣವಾಗಿ ಬದಲಾಗಿತ್ತು. ಅದುವರೆಗೂ ಹೆಚ್ಚಾಗಿ ಹಳ್ಳಿ ಸೀಮೆಯ ಪಾತ್ರಗಳಲ್ಲಿ ಕಾಣಿಸುತ್ತಾ ಬಂದಿದ್ದ ಸತೀಶ್ ಚಂಬಲ್‍ನಲ್ಲಿ ಖಡಕ್ ಅಧಿಕಾರಿಯಾಗಿ ಮಿಂಚಿದ್ದರು. ಆ ಪಾತ್ರಕ್ಕೆ ಅವರು ಪರಕಾಯಪ್ರವೇಶ ಮಾಡಿದ್ದ ರೀತಿಯಿಂದಲೇ ತಾನೋರ್ವ ಪರಿಪೂರ್ಣ ನಟ ಅನ್ನೋದನ್ನು ಸಾಬೀತುಪಡಿಸಿದ್ದರು. ಗೋದ್ರಾ ಚಿತ್ರದಲ್ಲಿ ಮತ್ತೊಂದು ಬಗೆಯ ಪಾತ್ರದಲ್ಲಿ ಸತೀಶ್ ಮಿಂಚಿದ್ದಾರಂತೆ. ಅದು ಅಭಿಮಾನಿಗಳ ಪಾಲಿಗೆ ನಿಜವಾದ ಸರ್ಪ್ರೈಸ್.

ಗೋದ್ರಾ ಬಿಡುಗಡೆಯ ಹಾದಿಯಲ್ಲಿರುವಾಗಲೇ ಸತೀಶ್ ಮ್ಯಾಟ್ನಿಗೆ ರೆಡಿಯಾಗುತ್ತಿದ್ದಾರೆ. ಅದರಲ್ಲಿ ಅವರದ್ದು ನಗರ ಪ್ರದೇಶದ ಪಾತ್ರವಂತೆ. ಈವರೆಗೆ ನಟಿಸಿರೋ ಅಷ್ಟೂ ಪಾತ್ರಗಳಲ್ಲಿಯೂ ಭಿನ್ನವಾದ ಆ ಪಾತ್ರಕ್ಕಾಗಿ ಅವರೀಗ ತಾಲೀಮು ನಡೆಸುತ್ತಿದ್ದಾರೆ. ಒಂದೇ ಥರದ ಪಾತ್ರಗಳಿಗೆ ಅಂಟಿಕೊಳ್ಳದೆ ಥರ ಥರದ ಪಾತ್ರಗಳನ್ನ ಮಾಡಬೇಕೆಂಬ ಹಂಬಲ ಸತೀಶ್ ಅವರದ್ದು. ಅದಕ್ಕೆ ತಕ್ಕುದಾದ ಪಾತ್ರವೇ ಮ್ಯಾಟ್ನಿಯಲ್ಲವರಿಗೆ ದಕ್ಕಿದೆಯಂತೆ. ಸದ್ಯ ಅವರ ಗಮನವೆಲ್ಲ ಅದರ ಸುತ್ತಲೇ ಗಿರಕಿ ಹೊಡೆಯುತ್ತಿದೆ.

Click to comment

Leave a Reply

Your email address will not be published. Required fields are marked *