Tuesday, 22nd October 2019

Recent News

ಕೆಜಿಎಫ್‍ಗೆ ಎಂಟ್ರಿ ಕೊಟ್ಟ ತಮಿಳು ನಟ ಸರಣ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್2 ಮೊದಲ ಭಾಗವನ್ನು ಮೀರಿಸುವಂತೆ ಸದ್ದು ಮಾಡುತ್ತಿರೋದು ಸುಳ್ಳಲ್ಲ. ಅದರಲ್ಲಿಯೂ ತಾರಾಗಣಕ್ಕೆ ಘಟಾನುಘಟಿ ನಟರು ಬಂದು ಸೇರಿಕೊಳ್ಳುವ ಮೂಲಕವೂ ಈ ಚಿತ್ರ ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೇ ಅಧೀರನಾಗಿ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಆಗಮನವಾಗಿದೆ. ಅವರ ಭಾಗದ ಚಿತ್ರೀಕರಣವೂ ನಡೆಯುತ್ತಿದೆ. ಇದೇ ಹೊತ್ತಲ್ಲಿ ತಮಿಳು ನಟ ಸರಣ್ ಕೂಡಾ ಆಗಮಿಸಿದ್ದಾರೆ.

ಸರಣ್ ಕೆಜಿಎಫ್ ಚಿತ್ರತಂಡ ಸೇರಿಕೊಂಡಿರೋದರ ಬಗ್ಗೆ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಖುಷಿಯಿಂದ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಯಶ್ ಎಂಬ ಅದ್ಭುತ ವ್ಯಕ್ತಿತ್ವದ ಅದ್ಭುತ ನಟನೊಂದಿಗೆ ನಟಿಸಲು ಅವಕಾಶ ಸಿಕ್ಕ ಬಗ್ಗೆ ಖುಷಿಗೊಂಡಿರೋ ಸರಣ್, ಯಶ್ ತೆರೆಯ ಮುಂದೆ ಮಾತ್ರವಲ್ಲದೇ ತೆರೆಯ ಹಿಂದೆಯೂ ಸ್ಫೂರ್ತಿದಾಯಕ ವ್ಯಕ್ತಿತ್ವ ಹೊಂದಿರುವವರೆಂದು ಕೊಂಡಾಡಿದ್ದಾರೆ. ಅಂದಹಾಗೆ ಈ ಸರಣ್ ತಮಿಳಿನಲ್ಲಿ ಕಾದಲ್, ವಿಶ್ವರೂಪಂ, ವಾಡಾಚೆನ್ನೈ ಮುಂತಾದ ಚಿತ್ರಗಳಲ್ಲಿ ನಟಿಸೋ ಮೂಲಕ ಪ್ರಸಿದ್ಧಿ ಹೊಂದಿರುವ ನಟ. ಅವರಿಗೆ ಕೆಜಿಎಫ್‍ನಲ್ಲಿಯೂ ಖದರ್ ಹೊಂದಿರೋ ಪಾತ್ರವೇ ಸಿಕ್ಕಿದೆಯಂತೆ.

ಕೆಜಿಎಫ್ ಚಿತ್ರೀಕರಣ ಕೋಲಾರದ ಕೆಜಿಎಫ್ ಗೋಲ್ಡ್ ಫೀಲ್ಡ್‍ನಲ್ಲಿ ಸಾಂಗವಾಗಿ ನೆರವೇರುತ್ತಿತ್ತು. ಆದರೆ ಈ ಚಿತ್ರೀಕರಣದಿಂದ ಪರಿಸರಕ್ಕೆ ಹಾನಿಯಾಗಿ ಸ್ಥಳೀಯರಿಗೂ ತೊಂದರೆಯಾಗಿದೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ದೂರು ದಾಖಲಿಸಿದ್ದರು. ಈ ಸಂಬಂಧವಾಗಿ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ಕೆಜಿಎಫ್ ಭಾಗ ಒಂದರ ಹಂತದಲ್ಲಿಯೇ ಹಲವಾರು ಅಡೆತಡೆಗಳನ್ನು ಮೀರಿಕೊಂಡು ಬಂದಿರೋ ಚಿತ್ರತಂಡ ಈ ಕಂಟಕವನ್ನೂ ಸಮರ್ಥವಾಗಿ ಎದುರಿಸೋದರಲ್ಲಿ ಸಂಶಯವೇನಿಲ್ಲ. ಇದೆಲ್ಲದರ ನಡುವೆಯೇ ಸಂಜಯ್ ದತ್ ನಂತರ ಸರಣ್ ಆಗಮನವಾಗಿದೆ. ಇನ್ನೂ ಒಂದಷ್ಟು ಕಲಾವಿದರು ಹೀಗೆಯೇ ಕೆಜಿಎಫ್ ತಂಡ ಸೇರಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *