Connect with us

Cinema

ವಿದೇಶದಲ್ಲಿ ಉನ್ನತ ಶಿಕ್ಷಣ ಪೂರೈಸಲು ಯುವತಿಗೆ ಪ್ರಕಾಶ್ ರೈ ಸಹಾಯ

Published

on

– ಭಾವುಕಳಾದ ವಿದ್ಯಾರ್ಥಿನಿ

ಹೈದರಾಬಾದ್: ಬಹುಭಾಷಾ ನಟ ಪ್ರಕಾಶ್ ರೈ ಲಾಕ್‍ಡೌನ್ ವೇಳೆ ತಮ್ಮ ಕೆಲಸಗಾರರಿಗೆ ಹಾಗೂ ಇತರ ಬಡವರಿಗೆ ಸಹಾಯ ಮಾಡಿದ್ದನ್ನು ನೋಡಿದ್ದೇವೆ. ಇದೀಗ ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿನಿಗೆ ಸಹಾಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಯುವತಿಯೊಬ್ಬರಿಗೆ ವಿದೇಶದಲ್ಲಿ ಓದಲು ಪ್ರಕಾಶ್ ರೈ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿನಿ ಟಿಗಿರಿಪಲ್ಲಿ ಸಿರಿಚಂದನ ಇತ್ತೀಚೆಗೆ ಕಂಪ್ಯೂಟರ್ ಸೈನ್ಸ್ ಪದವಿ ಪೂರೈಸಿದ್ದಾರೆ. ಬಳಿಕ ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಗರದ ಪ್ರತಿಷ್ಠಿತ ಸಾಲ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಆದರೆ ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಅಷ್ಟು ಶುಲ್ಕವನ್ನು ಭರಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಹೀಗಾಗಿ ಅಸಹಾಯಕರಾಗಿದ್ದರು. ಇದನ್ನರಿತ ನಟ ಪ್ರಕಾಶ್ ರೈ, ವಿದ್ಯಾರ್ಥಿನಿಗೆ ಬೋಧನಾ ಶುಲ್ಕ ಹಾಗೂ ಆಕೆಯ ಜೀವನ ವೆಚ್ಚ ಪಾವತಿಸಿದ್ದಾರೆ.

ಪ್ರಕಾಶ್ ರೈ ಅವರು ಸಹಾಯ ಮಾಡುತ್ತಿದ್ದಂತೆ ಚಂದನಾ ಅವರನ್ನು ಭೇಟಿಯಾಗಿ ತನ್ನ ಕನಸನ್ನು ಸಾಕಾರಗೊಳಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ವಾಹಿನಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಕಾಶ್ ರೈ ಅವರಿಂದ ಕಲಿತ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ.

ನಾನು 9 ವರ್ಷದವಳಿದ್ದಾಗಲೇ ತಂದೆ ತೀರಿ ಹೋದರು. ನಂತರ ನಮ್ಮ ತಾಯಿ ಕುಟುಂಬದ ಹೊರೆ ಹೊತ್ತುಕೊಂಡರು. ಪದವಿ ಬಳಿಕ ನಾನು ಮಾಹಿತಿ ತಂತ್ರಜ್ಞಾನದ ಸ್ನಾತಕೋತ್ತರ ಪದವಿ ಮಾಡುವ ಬಯಕೆ ಇತ್ತು. ಆದರೆ ನನಗೆ ಅಷ್ಟೊಂದು ಹಣ ನೀಡಲು ಸಾಧ್ಯವಿರಲಿಲ್ಲ. ಇದೇ ವೇಳೆ ನನ್ನ ಸ್ನೇಹಿತೆಯ ಮೂಲಕ ಈ ವಿಚಾರ ಪ್ರಕಾಶ್ ರೈ ಅವರಿಗೆ ತಿಳಿಯಿತು. ನಂತರ ನನಗೆ ಸಹಾಯ ಮಾಡಲು ಮುಂದೆ ಬಂದರು ಎಂದು ತಿಳಿಸಿದ್ದಾರೆ.

ಕಾಲೇಜಿನ ಎಲ್ಲ ಶುಲ್ಕದಿಂದ ಹಿಡಿದು ನನ್ನ ದಿನನಿತ್ಯದ ಖರ್ಚು ವೆಚ್ಚಗಳನ್ನು ಅವರೇ ಭರಿಸಿದರು. ಪ್ರಕಾಶ್ ರೈ ಸರ್‍ಗೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ಅಲ್ಲದೆ ಇತರರಿಗೆ ನಾನು ಸಹಾಯ ಮಾಡುವ ಕುರಿತು ಸಹ ಅವರು ಕಲಿಸಿಕೊಟ್ಟರು ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *