Connect with us

Dakshina Kannada

‘ಸುಳ್ಯ ರಂಗಮನೆ ಪ್ರಶಸ್ತಿ’ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಆಯ್ಕೆ

Published

on

ಮಂಗಳೂರು: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಸಂಸ್ಥೆಯು ಪ್ರತಿವರ್ಷ ಕೂಡ ಮಾಡುವ 2021 ನೇ ಸಾಲಿನ ‘ಸುಳ್ಯ ರಂಗಮನೆ ಪ್ರಶಸ್ತಿ’ಗೆ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಆಯ್ಕೆ ಮಾಡಲಾಗಿದೆ.

40 ವರ್ಷಗಳಿಂದ ರಂಗಭೂಮಿ ಮತ್ತು ಚಲನ ಚಿತ್ರರಂಗದಲ್ಲಿ ನಟ, ನಿರ್ದೇಶಕನಾಗಿ ಮಿಂಚಿದ ಚಂದ್ರು ಅವರು ತನ್ನದೇ ಆದ ಅಭಿನಯ ಶೈಲಿ, ಮಾತಗಾರಿಕೆಯಿಂದ ಪ್ರಸಿದ್ಧರಾದವರು. ಹಾಸ್ಯ ಮತ್ತು ಖಳನಾಯಕನಾಗಿ ಮಿಂಚಿದ ಚಂದ್ರುರವರ ಮುಖ್ಯಮಂತ್ರಿ ನಾಟಕ ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡ ಜನಪ್ರಿಯ ರಾಜಕೀಯ ನಾಟಕವಾಗಿದೆ.

ಗೌರಿಬಿದನೂರಿನಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕನ್ನಡ ನಾಡು, ನುಡಿ, ಗಡಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದಾರೆ.

ಇಂಗ್ಲೆಂಡ್, ಮ್ಯಾಂಚಿಸ್ಟೇರ್‍ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ಪ್ಯಾರಿಸ್‍ನಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನ, ಅಮೇರಿಕದ ಅಕ್ಕ ಸಮ್ಮೇಳನ ಮುಂತಾದೆಡೆ ಕನ್ನಡದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಇವರ ರಂಗಭೂಮಿ ಮತ್ತು ಕನ್ನಡ ಸೇವೆಯನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಚಂದ್ರು ಅಭಿನಯಿಸಿದ ನಾಟಕಗಳು ಸಾವಿರಾರು ದಿನ ಪ್ರದರ್ಶನ ಕಂಡಿರುತ್ತದೆ. ಸುಮಾರು ಐನೂರಕ್ಕೂ ಅಧಿಕ ಚಲನಚಿತ್ರದಲ್ಲಿ ಅಭಿನಯಿಸಿ, ಈಗಲೂ ನಾಟಕಗಳಲ್ಲಿ ಅಭಿನಯಿಸುತ್ತಾ ಕೋಟ್ಯಂತರ ಕನ್ನಡಿಗರ ಮನಗೆದ್ದ ಚಂದ್ರು ಅವರನ್ನು ಈ ವರ್ಷದ ರಂಗಮನೆ ಪ್ರಶಸ್ತಿಗೆ ಸಮಿತಿಯು ಆಯ್ಕೆ ಮಾಡಿದೆ.

ಪ್ರಶಸ್ತಿಯು 10 ಸಾವಿರ ನಗದು ಸೇರಿದಂತೆ ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿರುತ್ತದೆ. ಮಾರ್ಚ್ 14 ರಂದು 20ನೇ ವರ್ಷದ ರಂಗಸಂಭ್ರಮದ ಸಂದರ್ಭದಲ್ಲಿ ರಂಗಮನೆಯಲ್ಲಿ ನಡೆಯುವ 8 ದಿನಗಳ ಬಹುಭಾಷಾ ನಾಟಕೋತ್ಸವದ ಸಮಾರೋಪದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *