Connect with us

Cinema

ಕನಿಷ್ಠ ದರ್ಶನ್ ಒಂದು ಫೋನ್ ಮಾಡಬಹುದಿತ್ತು- ಜಗ್ಗೇಶ್ ಬೇಸರ

Published

on

– ರಾಮನಗರ ಸರ್ಕಲ್‍ನಲ್ಲಿ ಗಲಾಟೆ ಮಾಡಲು ಸ್ಕೆಚ್
– ಎಷ್ಟು ಜನ ನುಗ್ಗಿದ್ರೂ ಏನೂ ಮಾಡಕ್ಕಾಗಲ್ಲ

ಮೈಸೂರು: ತೋತಾಪುರಿ ಸಿನಿಮಾ ಸೆಟ್‍ನಲ್ಲಿ ನಡೆದ ಗಲಾಟೆ ರಾಮನಗರ ಸರ್ಕಲ್‍ನಲ್ಲಿ ನಡೆಸಲು ಸ್ಕೆಚ್ ಹಾಕಿದ್ದರು. ಆದರೆ ಅದು ವಿಫಲವಾಗಿತ್ತು ಎಂದು ದರ್ಶನ್ ಅಭಿಮಾನಿಗಳು ತಮ್ಮ ಮೇಲೆ ದಾಳಿ ನಡೆಸಿದ್ದರ ಕುರಿತು ನಟ ಜಗ್ಗೇಶ್ ಮಾತನಾಡಿದ್ದಾರೆ.

ಈ ಬಗ್ಗೆ ಅತ್ತಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಹೀಗಾಗಿ ಚಿತ್ರರಂಗದ ಹಣೆಬರಹ ನನಗೆ ಗೊತ್ತು. ಮುಂಚೆ ನೂರು ದಿನ ಸಿನಿಮಾ ಓಡುತ್ತಿದ್ದವು. ಇವತ್ತು ಒಂದೆರಡು ದಿನ ಸಿನಿಮಾ ಓಡುವುದರ ಮೇಲೆ ಸ್ಟಾರ್ ಡಮ್ ನಿರ್ಧಾರ ಆಗುತ್ತಿದೆ. ಈ ಪರಿಸ್ಥಿತಿಯಿಂದ ನಮ್ಮಂತಹ ಸ್ಟಾರ್‍ಗಳಿಗೆ ಹೆಲ್ಪ್ ಆಗುತ್ತಿದೆ, ನಿರ್ಮಾಪಕರಿಗಲ್ಲ ಎಂದು ತಿಳಿಸಿದರು.

ನಾವು ಒಗ್ಗಟ್ಟಿನ ಮೂಲಮಂತ್ರದಲ್ಲಿ ಬೆಳೆದವರು. ಒಂದು ವಿಚಾರವನ್ನ ಅಳೆದು ತೂಗಿ ವಿಮರ್ಶೆ ಮಾಡಬೇಕು. ನಾನು ಹಳೇ ಕಥೆಯನ್ನ ಮತ್ತೆ ಮತ್ತೆ ಹೇಳುವುದಿಲ್ಲ. ಅಂದು 20 ಹುಡುಗರು ಬಂದು ಗಲಾಟೆ ಮಾಡಿದರು. ತೋತಾಪುರಿ ಸಿನಿಮಾ ಚಿತ್ರೀಕರಣ ನಿಲ್ಲಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು. ಬಹಳ ಶಾಂತಿಯುತವಾಗಿ ಇಲ್ಲಿ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಗಲಾಟೆ ನಡೆಯಿತು.

ಈ ಗಲಾಟೆ ಸೆಟ್‍ನಲ್ಲಿ ನಡೆಯಬೇಕಾಗಿದ್ದಲ್ಲ. ರಾಮನಗರ ಸರ್ಕಲ್‍ನಲ್ಲಿ ನಡೆಸುವ ಹುನ್ನಾರ ನಡೆದಿತ್ತು. ನನ್ನ ಚಲನವಲನಗಳನ್ನೆಲ್ಲ ಗಮನಿಸಿದ್ದರು. ಇದನ್ನು ನಾನು ಸಾಬೀತುಪಡಿಸುತ್ತೇನೆ. ಬೇರೆ ಬೇರೆ ಕಾರಣಗಳಿಂದಾಗಿ ರಾಮನಗರ ಸರ್ಕಲ್‍ಗೆ ಅಂದು ಬರಲಿಲ್ಲ. ಬಳಿಕ ಸೆಟ್‍ನಿಂದಲೇ ಯಾರೋ ನನ್ನ ಬಗ್ಗೆ ಮಾಹಿತಿ ಹಂಚಿದ್ದಾರೆ. ಬಳಿಕ ಅಲ್ಲಿಗೆ ಬಂದಿದ್ದಾರೆ. ನಾವು ಮಾಹಿತಿ ಹಂಚಿದವನನ್ನು ಕಂಡು ಹಿಡಿಯುತ್ತೇವೆ ಎಂದರು.

ಗಲಾಟೆ ಮಾಡಿ, ವಿಡಿಯೋ ಮಾಡಿ ಜಗ್ಗೇಶ್ ಮಾನ ಹರಾಜು ಹಾಕಲು ಯತ್ನಿಸಿದರು. ನಮ್ಮನ್ನು ಬೆಳೆಸುವವರು, ಚಪ್ಪಾಳೆ ತಟ್ಟುವವರು ದೇವರು. ನಾವೇ ದೇವರು ಎಂದು ಬೋರ್ಡ್ ಹಾಕಿಕೊಂಡವರಲ್ಲ. ಚಿರು ಸರ್ಜಾ ತೀರಿಕೊಂಡಾಗ ಎಷ್ಟು ಜನ ಬಾಯಿಕೊಂಡಿರಿ? ಆತ ಸತ್ತು ವರ್ಷ ಆಗಿಲ್ಲ, ಎಷ್ಟು ಜನ ಅವರ ಮನೆಗೆ ಹೋಗಿ ಮನೆಯವರನ್ನು ಸಂತೈಸಿದಿರಿ. ಜಗ್ಗೇಶ್ ಸತ್ತರೂ ಅಷ್ಟೇ ಎಲ್ಲಾ ಮರೆತುಹೋಗುತ್ತಾರೆ. ಜಗತ್ತು ನಶ್ವರ ನಾನು ಎನ್ನುವ ಅಹಂ ಬೇಡ ಎಂದರು.

ಗಲಾಟೆ ನಡೆದ ದಿನ ನಾನು ದೊಡ್ಡದು ಮಾಡಿದ್ದರೆ ನಿರ್ಮಾಪಕನ ಬದುಕಿಗೆ ಪೆಟ್ಟು ಬಿದ್ದಿರುತ್ತಿತ್ತು. ದರ್ಶನ್ ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅಂದು ಪೋಲಿಸರು ಅವನನ್ನು ಚಪ್ಪಲಿ ಇಲ್ಲದೆ ನಿಲ್ಲಿಸಿದ್ದಾಗ, ಅವನ ಬೆಂಬಲಕ್ಕೆ ಯಾರು ಬಂದಿದ್ದರು? ಜಗ್ಗೇಶ್ ಬಂದಿದ್ದನು ಅಲ್ವಾ? ಅಷ್ಟು ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನು ಕಳುಹಿಸಿ ಎಂದು ಪೋಲಿಸರಿಗೆ ಹೇಳಿದ್ದೆ. ಇದನ್ನು ದರ್ಶನ್ ಕೂಡ ನೆನೆಯಬೇಕು ಎಂದರು.

ಕನ್ನಡದ ರಜನಿಕಾಂತ್ ಅಂತ ನಾನು ದರ್ಶನ್‍ಗೆ ಹೇಳಿದ್ದೆ. ಆತ ಈ ಘಟನೆ ಬಳಿಕ ನನಗೆ ಫೋನ್ ಮಾಡಬಹುದಿತ್ತು ಅಂತ ನನ್ನ ಪತ್ನಿ ಹೇಳುತ್ತಿದ್ದರು, ದರ್ಶನ್‍ಗೆ ಅಪಘಾತವಾದಾಗ ಕರೆ ಮಾಡಿ ವಿಚಾರಿಸಿದ್ರಿ. ಈಗ ಎಲ್ಲಿದ್ದಾರೆ ಅವರೆಲ್ಲಾ ಎಂದು ಪ್ರಶ್ನಿಸಿದ್ದರು. ಇದು ಕೃತಜ್ಞತೆ ಇಲ್ಲದ ಸಮಾಜ. ನನ್ನ ಕೈ ಕೆಳಗೆ ಎಷ್ಟೋ ನಟ, ನಟಿಯರು ತಯಾರಾಗಿದ್ದಾರೆ. ನಾನು ಅನ್ನೋದು, ವಯಸ್ಸು ಅನ್ನೋದು ಆಸತ್ವ ಅಲ್ಲ. ಕಡೆವರೆಗೂ ಬರುವುದು ಗುಣ ಅಷ್ಟೇ, ಅವತ್ತು ಗಲಾಟೆ ಮಾಡಲು ಬಂದಿದ್ದ ಒಂದಿಬ್ಬರು ದಿನಬೆಳಗಾದರೆ ದರ್ಶನ್ ಜೊತೆ ಇರುತ್ತಾರೆ. ಎಲ್ಲ ಕಡೆ ಅವರ ಫೋಟೋ ಇದೆ. ಕೆಲ ಮಾಧ್ಯಮಗಳು ಈ ವಿಚಾರವನ್ನ ತಣ್ಣಗೆ ಮಾಡಬಹುದಿತ್ತು. ಆದರೆ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದು ಪತ್ರಕರ್ತರ ಮರು ಪ್ರಶ್ನೆಗೆ ಉತ್ತರಿಸದೆ ಹೊರಟರು.

Click to comment

Leave a Reply

Your email address will not be published. Required fields are marked *