Connect with us

Bengaluru City

ಗೆಳತಿಯನ್ನ ವರಿಸಿದ ಬಿಗ್‍ಬಾಸ್ ಜಗನ್

Published

on

ಬೆಂಗಳೂರು: ಕಿರುತೆರೆ ನಟ ಮತ್ತು ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ಅವರು ತಮ್ಮ ಬಹುಕಾಲದ ಗೆಳತಿಯನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜಗನ್ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಆತ್ಮೀಯ ಗೆಳತಿ ರಕ್ಷಿತಾ ಮುನಿಯಪ್ಪ ಅವರ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕನ್ವೆಂಷನ್ ಹಾಲ್‍ನಲ್ಲಿ ಈ ಜೋಡಿಯ ಮದುವೆ ನಡೆದಿದೆ. ಗುರುಹಿರಿಯರು ನಿಶ್ಚಯಿಸಿದ್ದ ಮುಹೂರ್ತದಲ್ಲಿ ಜಗನ್ ಅವರು ಹಿಂದೂ ಸಂಪ್ರಯದಾಯದ ಪ್ರಕಾರ ಮಾಂಗಲ್ಯಧಾರಣೆ ಮಾಡಿದ್ದಾರೆ.

ಈ ಜೋಡಿಯ ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ. ಇತ್ತೀಚೆಗಷ್ಟೆ ಜಗನ್ ಅರಿಶಿಣ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಇತ್ತ ರಕ್ಷಿತಾ ಅವರು ಕೂಡ ಮೆಹಂದಿ ಸಂಭ್ರಮದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಹಂಚಿಕೊಂಡಿದ್ದರು.

ದುಬೈನ ಕಾಲೇಜೊಂದರಲ್ಲಿ ರಕ್ಷಿತಾ ಮುನಿಯಪ್ಪ ವ್ಯಾಸಂಗ ಮುಗಿಸಿದ್ದು, ರಕ್ಷಿತಾ ಮತ್ತು ಜಗನ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಾವು ಪ್ರೀತಿ ಮಾಡುತ್ತಿದ್ದ ಬಗ್ಗೆ ಮನೆಯಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಪ್ರೀತಿಗೆ ಕುಟುಂಬದವರು ಸಮ್ಮತಿಸಿ ಈಗ ಎರಡು ಕುಟುಂಬದವರು ಒಪ್ಪಿ ಜಗನ್-ರಕ್ಷಿತಾ ಮದುವೆ ಮಾಡಿದ್ದಾರೆ.

ನಟ ಜಗನ್ ‘ಜೋಶ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದು, ಅನೇಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ‘ಬಿಗ್‍ಬಾಸ್ ಸೀಸನ್ 5’ರ ಸ್ಪರ್ಧಿಯಾಗಿ ಖ್ಯಾತಿ ಪಡೆದಿದ್ಧಾರೆ. ಮೇ 26 ರಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.