Chamarajanagar
ಪ್ರಾಣಿ ಬೇಕಾದ್ರೆ ನಂಬೋದು, ಮನುಷ್ಯರನ್ನ ನಂಬೋಕಾಗಲ್ಲ, ಕಾಡೇ ನಂಗಿಷ್ಟ: ದುನಿಯಾ ವಿಜಯ್

– ಸಲಗನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು
ಚಾಮರಾಜನಗರ: ಕಾಡು ಯಾವಾಗಲೂ ಶಾಂತ, ಕಾಡಲ್ಲಿ ಪ್ರಾಣಿ ನಂಬಿ ಬದುಕಬಹುದು ಆದರೆ ನಾಡಲ್ಲಿ ಮನುಷ್ಯನ್ನ ನಂಬೋಕೆ ಆಗಲ್ಲ. ಹೀಗಾಗಿ ಕಾಡಿನತ್ತ ಹೆಚ್ಚು ಒಲವು ಎಂದು ನಟ ದುನಿಯಾ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆಗೆ ದುನಿಯಾ ವಿಜಯ್ ಭೇಟಿ ನೀಡಿದ್ದು, ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ್ದಾರೆ. ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ನಿರ್ದೇಶಿಸುತ್ತಿರುವ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಜನವರಿಯಲ್ಲಿ ನಾನು ನಿರ್ದೇಶಿಸುತ್ತಿರುವ ಚಿತ್ರದ ಬಗ್ಗೆ ರಿವೀಲ್ ಮಾಡುತ್ತೇವೆ ಎಂದು ತಿಳಿಸಿದರು.
ಕಾಡೆಂದರೆ ನನಗೆ ತುಂಬಾ ಇಷ್ಟ, ಯಾವಾಗಲೂ ಶಾಂತವಾಗಿರುತ್ತದೆ. ಅಲ್ಲದೆ ಕಾಡಿನಲ್ಲಿ ಪ್ರಾಣಿಗಳನ್ನು ಬೇಕಾದರೆ ನಂಬಿ ಬದುಕಬಹುದು. ಆದರೆ ನಾಡಿನಲ್ಲಿ ಮನುಷ್ಯರನ್ನು ನಂಬಿ ಬದುಕಲು ಆಗಲ್ಲ. ನನಗೆ ಕಾಡೆಂದರೆ ತುಂಬಾ ಇಷ್ಟ, ಹೀಗಾಗಿ ಇತ್ತೀಚೆಗೆ ಕಾಡಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೇನೆ ಎಂದರು.
ನಾನೇ ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಮೂಲಕ ಚಾಮರಾಜನಗರ ಜಿಲ್ಲೆಯ ಯುವಕನನ್ನು ನಾಯಕ ನಟನನ್ನಾಗಿ ಬೆಳ್ಳಿ ಪರದೆಗೆ ತರುತ್ತಿದ್ದೇವೆ. ಈ ಬಗ್ಗೆ ನಮಗೂ ತುಂಬಾ ಖುಷಿಯಿದೆ. ರಾಜ್ ಮನೆತನದ ಲಕ್ಕಿ ಗೋಪಾಲ್ ಎಂಬ ಯುವ ನಟನನ್ನು ಹಿರೋ ಆಗಿ ಪರಿಚಯಿಸುತ್ತಿದ್ದೇವೆ. ನಟ ಹೇಗಿದ್ದಾರೆ, ತಯಾರಿ ಹೇಗಿದೆ ಎಂಬುದರ ಬಗ್ಗೆ ಶೀಘ್ರ ರಿವೀಲ್ ಮಾಡುತ್ತೇವೆ. ಅಣ್ಣಾವ್ರ ಮನೆತನದ ಮತ್ತೊಂದು ಕುಡಿ ಅದು. ನಾನು ಈ ಸಿನಿಮಾ ನಿರ್ದೇಶನವನ್ನಷ್ಟೇ ಮಾಡುತ್ತಿದ್ದೇನೆ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಕೊರೊನಾ ತೊಲಗುತ್ತಿದ್ದಂತೆ ಆದಷ್ಟು ಬೇಗ ಸಲಗ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಗುಂಡ್ಲುಪೇಟೆಗೆ ದುನಿಯಾ ವಿಜಯ್ ಆಗಮಿಸುವುದನ್ನು ಅರಿತಿದ್ದ ಅಭಿಮಾನಿಗಳು, ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬ್ಲಾಕ್ ಕೋಬ್ರಾ ನೋಡಲು ಮುಗಿಬಿದ್ದರು. ಇದೇ ವೇಳೆ ಅಭಿಮಾನಿಗಳಿಗಾಗಿ ದುನಿಯಾ ವಿಜಯ್ ಸಲಗ ಚಿತ್ರದ ಡೈಲಾಗ್ ಹೊಡೆದು ರಂಜಿಸಿದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದುನಿಯಾ ವಿಜಯ್ ಪತ್ನಿ ಮತ್ತು ಮಗನ ಜೊತೆ ಆಗಮಿಸಿದ್ದರು. ವಿಜಯ್ ಜೊತೆ ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
