Connect with us

Bengaluru City

ದರ್ಶನ್ ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ರಿಲೀಸ್

Published

on

– ದಾಸಾ ಇನ್ಮುಂದೆ ರಶ್ಮಿಕಾಗೆ ಖಾಸ!

ಬೆಂಗಳೂರು: ಇತ್ತೀಚೆಗಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದ ಶಿವನಂದಿ ಲಿರಿಕಲ್ ಹಾಡು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿತ್ತು. ಈಗ ಇದೇ ಸಿನಿಮಾದ ಇನ್ನೊಂದು ‘ಒಂದು ಮುಂಜಾನೆ’ ಲಿರಿಕಲ್ ಹಾಡು ರಿಲೀಸ್ ಆಗಿದೆ.

ನಟ ದರ್ಶನ್ ಮತ್ತು ನಟಿ ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ಇದಾಗಿದ್ದು, ಇದನ್ನು ಸ್ವೀಡನ್ ನಲ್ಲಿ ಚಿತ್ರೀಕರಿಸಲಾಗಿದೆ. ಮೊದಲಿಗೆ ಬರುವ ಮ್ಯೂಸಿಕ್ ಸಂಗೀತ ಪ್ರಿಯರನ್ನು ಮನಸೂರೆ ಮಾಡುವಂತೆ ಮಾಡುತ್ತದೆ. ‘ಒಂದು ಮುಂಜಾನೆ, ಹಂಗೆ ಸುಮ್ಮನೆ’ ಎಂಬ ಸಾಲುಗಳ ಮೂಲಕ ಹಾಡು ಪ್ರಾರಂಭವಾಗುತ್ತದೆ. ಸಂಪೂರ್ಣ ಹಾಡಿನಲ್ಲಿ ದರ್ಶನ್ ಮತ್ತು ರಶ್ಮಿಕಾ ಇಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಕಾಣಬಹುದಾಗಿದೆ. ಈ ಹಾಡಿನ ಮೂಲಕ ಇಬ್ಬರ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಸಲಾಗಿದೆ.

ಲಿರಿಕಲ್ ವಿಡಿಯೋದಲ್ಲಿ ಕೆಲವು ದೃಶ್ಯದ ತುಣುಕುಗಳು ಸೇರಿದ್ದು, ಸುಂದರ ಸ್ಥಳದಲ್ಲಿ ದರ್ಶನ್ ಮತ್ತು ರಶ್ಮಿಕಾ ರೊಮ್ಯಾಂಟಿಕ್ ಜೋಡಿಯಾಗಿ ಮಿಂಚಿದ್ರೆ, ಹಾಡಿನ ಸಾಹಿತ್ಯದೊಂದಿಗೆ ಹಿತವಾದ ಸಂಗೀತ ಕೇಳುಗರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವುದು ಬಹುತೇಕ ನಿಶ್ಚಿತ. ಮುಂದಿನ ದಿನಗಳಲ್ಲಿ ಪ್ರೇಮಿಗಳ ಫೇವರೇಟ್ ಹಾಡು ಇದಾಗಲಿದೆ ಎಂಬುದನ್ನು ಸಾಬೀತು ಮಾಡಲು ಹೊರಟಿದೆ ಒಂದು ಮುಂಜಾನೆಯ ಕಥೆ.

ಈ ರಿಲಿಕಲ್ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಒಂದು ಗಂಟೆಯಲ್ಲಿಯೇ 3.95 ಲಕ್ಷ ವೀವ್ಸ್ ಕಂಡಿದ್ದು, 53 ಸಾವಿರ ಲೈಕ್ಸ್ ಕಂಡಿದೆ. ನಟ ದರ್ಶನ್ ಈ ಬಗ್ಗೆ, “ಶಿವನಂದಿ ಹಾಡಿಗೆ ನೀವು ತೋರಿಸಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಈಗ ಯಜಮಾನ ಚಿತ್ರದ 2ನೇ ಹಾಡು – ‘ಒಂದು ಮುಂಜಾನೆ’ ಮೆಲೋಡಿ ನಿಮಗಾಗಿ ಕೇಳಿ” ಎಂದು ಟ್ವೀಟ್ ಮಾಡಿದ್ದಾರೆ.

ವಿ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಒಂದು ಮುಂಜಾನೆ ಹಾಡಿಗೆ ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ. ಕವಿರಾಜ್ ವಿರಚಿತ ಹಾಡು ಇದಾಗಿದ್ದು, ಯಜಮಾನ ಸಿನಿಮಾ ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv