Friday, 28th February 2020

Recent News

ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೆನೆದು ಕಣ್ಣೀರಾದ ಅಭಿಮಾನಿಗಳು!

ಮಂಡ್ಯ: ಸಕ್ಕರೆ ನಾಡು ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಸ್ಯಾಂಡಲ್‍ವುಡ್ ಹಿರಿಯ ನಟ, ನಟಿಯರು, ನಿರ್ದೇಶಕರು, ಕಲಾವಿದರು ಸೇರಿದಂತೆ ಅಭಿಮಾನಿಗಳು ಕಣ್ಣೀರಾದರು.

ಅಂಬರೀಶ್ ಅಭಿಮಾನಿಗಳ ಬಳಗವು ಅಂಬಿ ಸಾರ್ಥಕ ನುಡಿನಮನ ಹಾಗೂ ಕನಗನಮರಡಿ ಬಸ್ ದುರಂತದಲ್ಲಿ ಮಡಿದವವರ ಕುಟುಂಬಗಳಿಗೆ ಪರಿಹಾರ ವಿತರಣಾ ಕಾರ್ಯಕ್ರಮವು ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆಸಿತು. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ಶಿವರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್, ಸಾಧುಕೋಕಿಲಾ, ನಿರ್ಮಾಪಕ ರಾಕಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿ, ಅಂಬರೀಶ್ ಅವರನ್ನು ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕರ ಭಾಷಣ ಕೇಳಿ ಸುಮಲತಾ ಅಂಬರೀಶ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಆಗಮಿಸಿದ ಅವರು, ಕನಗನಮರಡಿ ಬಸ್ ದುರಂತದಲ್ಲಿ ಮಡಿದವರ 30 ಜನರ ಕುಟುಂಬಸ್ಥರಿಗೆ ಪರಿಹಾರ ನೀಡಿದರು. ಅದೇ ದಿನ ಅಂಬರೀಶ್ ಕೂಡ ಇಹಲೋಕ ತ್ಯಜಿಸಿದ್ದರು. ಎಲ್ಲವನ್ನೂ ನೆನೆದ ಸುಮಲತಾ  ಕಣ್ಣಲ್ಲಿ ನೀರು ತುಂಬಿ ಬಂತು.

ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಅಂಬರೀಶ್ ಅಣ್ಣನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮಂಡ್ಯ ಇಂಡಿಯಾಗೆ ಗೊತ್ತು ಅಂತಾರೆ. ಅದು ಅಂಬರೀಶ್ ಅಣ್ಣನ ಸ್ವತ್ತು. ಯಾರೇ ಬಂದ್ರು ಅದೇ ಗತ್ತು ಎಂದರು. ಬಳಿಕ ವೇದಿಕೆಯ ಮೇಲೆ ಅಭಿಷೇಕ್ ಅವರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿದರು.

ಅಂಬರೀಶ್ ಅಧಿಕಾರಕ್ಕಾಗಿ, ಹಣಕ್ಕಾಗಿ ಎಂದೂ ಆಸೆ ಪಟ್ಟವರಲ್ಲ. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರಳ ಜೀವಿ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು ಒಂದು ಗತ್ತು ಹೊಂದಿದ್ದರು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿ, ಅಂಬಿ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

ಅಂಬರೀಶ್ ಅವರನ್ನು ಕರ್ಣನಿಗೆ ಹೋಲಿಸಿದ ಹಿರಿಯ ನಟ ದೊಡ್ಡಣ್ಣ ಅವರು, ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಂಬರೀಶ್ ಹೋರಾಡಿದ್ದನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟರು. ಅಂಬರೀಶ್ ಅವರು ಕನಗನಮರಡಿ ಬಸ್ ದುರಂತ ಕೇಳಿ ಮಗುವಿನಂತೆ ತೊಳಲಾಡಿದರು. ನಾನು ಘಟನಾ ಸ್ಥಳಕ್ಕೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ವಿಧಿ ಅವರನ್ನು ಅವತ್ತೇ ರಾತ್ರಿ ಕರೆದುಕೊಂಡುಬಿಟ್ಟಿತು ಎಂದು ಸ್ಮರಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಮೌನ ಮನೆಮಾಡಿ, ಅಂಬಿ ಕುಟುಂಬಸ್ಥರು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಅಭಿಮಾನಿಗಳು ಭಾವುಕರಾದರು.

ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಬೆಂಗಳೂರು ಮೊಬೈಲ್ ಇದ್ದಂತೆ, ಮಂಡ್ಯ ಚಾರ್ಜರ್ ಇದ್ದಂತೆ ಎಂದು ರೆಬೆಲ್ ಸ್ಟಾರ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದರು. ರಾಜಾಹುಲಿ ಸಿನಿಮಾದ ‘ಗೊಂಬೆ ಆಡ್ಸೋನು’ ಹಾಡಿ ಶೂಟಿಂಗ್ ಮಾಡುವಾಗ ಮಂಡ್ಯದವರಿಗೊಬ್ಬರಿಗೆ ಕೈಮ ಉಂಡೆ, ಮುದ್ದೆ ತರಲು ಅಂಬರೀಶ್ ಹೇಳಿದ್ದರು. ಆದರೆ ಒಬ್ಬರಲ್ಲ ಇಬ್ಬರಲ್ಲ ಅನೇಕರು ಅಂಬರೀಶ್ ಅವರು ಶೂಟಿಂಗ್‍ಗೆ ಬಂದಿದ್ದನ್ನು ಕೇಳಿ ಊಟ ತಂದಿದ್ದರು ಅಂತ ನೆನಪಿಸಿಕೊಂಡರು.

ರಕ್ತಕಣ್ಣಿರು ಚಿತ್ರದ ‘ವೇದಾಂತಗಳು, ಸಿದ್ಧಾಂತಗಳು ಯಾರೋ ಬರೆದಿಟ್ಟ ಕಟ್ಟು ಕಥೆ. ಜೀವನದ ರಸ ಸವಿಯೋಕೆ ನಾನೇ ನಿಮಗೆ ದಂತ ಕಥೆ ಎಂಬ ಹಾಡಿನ ಮೂಲಕ ಅಂಬಿ ಏನು ಎಂಬುದನ್ನು ನಟ, ನಿದೇರ್ಶಕ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಕಟ್ಟಿಕೊಟ್ಟರು.

ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ಅಂಬಿ ಏನನ್ನೂ ಬಯಸಿದವನಲ್ಲ. ಎಲ್ಲವೂ ಆತನನ್ನೇ ಹುಡುಕಿಕೊಂಡು ಬಂದಂತಿದ್ದು. ಆದರೆ ಸುಮಲತಾ ಅವರನ್ನು ಹೆಚ್ಚು ಇಷ್ಟಪಟ್ಟ ಅಂಬಿ, ಮಡದಿಯಾಗಿ ಪಡೆದರು. ರಾಜನಾಗಿಯೇ ಬಂದ ರೆಬೆಲ್ ಸ್ಟಾರ್ ರಾಜನಾಗೇ ಹೋದ ಎಂದ ಅವರು, ನನ್ನ ಆಯಸ್ಸು ಕೊಡ್ತೀನಿ ಅಂದ್ರೆ ಯಾರಿಗೆ ಬೇಕು ನಿಮ್ಮ ನೆಕ್ಲೇಸ್ ಕೊಡಿ ಅಂತ ಅಂಬರೀಶ್ ಒಮ್ಮೆ ಹಾಸ್ಯ ಮಾಡಿದ್ದರು ಎಂದು ನೆನೆದು ಕಣ್ಣೀರಾದರು.

ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ನಮ್ಮಪ್ಪನ ಬಗ್ಗೆ ಹೆಚ್ಚಾಗಿ ನಾನು ಏನು ಹೇಳಲ್ಲ. ಅಂಬರೀಶ್ ಅವರು ಹೇಗಿದ್ದರು, ಹೇಗೆ ಹೋದರು ಅಂತ ನಿಮಗೆ ಗೊತ್ತು. ಹಣ ಮುಖ್ಯ ಅಲ್ಲ ಮಗನೇ ಜನ ಮುಖ್ಯ ಅಂತ ಅಪ್ಪ ಯಾವಾಗ್ಲೂ ಹೇಳುತ್ತಿದ್ದರು. ಅಂತ್ಯಸಂಸ್ಕಾರದಲ್ಲಿಯೂ ಅಭಿಮಾನವನ್ನು ಮಂಡ್ಯ ಜನತೆ ಮೆರೆಯಿತು. ನಿಮಗೆ ನಾನು ಚಿರಋಣಿ ಎಂದರು.

ಅಭಿಷೇಕ್ ಮಾತನಾಡುವಾಗ ಕೆಲ ಅಭಿಮಾನಿಗಳು ಕೂಗಾಡುತ್ತಿದ್ದರು. ಈ ವೇಳೆ ಅಂಬಿ ಸ್ಟೇಲ್‍ನಲ್ಲಿಯೇ ಅಭಿಷೇಕ್ ಕೂಗಾಡಿ ನಮ್ಮಪ್ಪನಿಗೂ ಕೇಳಲಿ ಎಂದು ಭಾವುಕರಾದರು. ನಮ್ಮ ತಾಯಿ ನಿಮ್ಮ ಪ್ರೀತಿಯಲ್ಲಿ ಒಂದಿಷ್ಟು ಭಾಗ ಮಗ ಅಭಿಷೇಕ್ ಕೊಡಿ ಅಂತ ಕೇಳಿದ್ದಾರೆ. ಅಪ್ಪ ನಡೆದ ದಾರಿಯಲ್ಲಿ ನಡೆದರೆ ಅಷ್ಟೇ ಪ್ರೀತಿ ನಮಗೆ ಕೊಡುತ್ತಾರೆ ಎಂದು ಸುಮಲತಾ ಅವರಿಗೆ ಅಭಿಷೇಕ್ ಇದೇ ವೇಳೆ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *