Chikkaballapur
ಅಫೀಮು ಸೇವನೆ, ಮಾರಾಟ ಮಾಡ್ತಿದ್ದ ಇಬ್ಬರ ಬಂಧನ

ಚಿಕ್ಕಬಳ್ಳಾಪುರ: ಮಾದಕ ವಸ್ತು ಅಫೀಮು ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಜಸ್ಥಾನದವರಾದ ರಾಣಾ ಸಿಂಗ್ ಹಾಗೂ ಜೋಧು ಸಿಂಗ್ ಬಂಧಿತರು. ಇವರು ನಗರದ ಪ್ರಶಾಂತ ನಗರದಲ್ಲಿ ವಾಸವಾಗಿದ್ದಾರೆ. ಅಂದಹಾಗೆ 2003 ರಿಂದಲೇ ಚಿಕ್ಕಬಳ್ಳಾಪುರ ನಗರದಲ್ಲಿ ನೆಲೆಸಿದ್ದ ರಾಣಾಸಿಂಗ್ ಬಟ್ಟೆ ಅಂಗಡಿ, ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ಪೇಪರ್, ತಟ್ಟೆ, ಪರಿಕರಗಳ ಅಂಗಡಿ ಇಟ್ಟುಕೊಂಡಿದ್ದನು.
ಇವರಿಬ್ಬರು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ರೂಮ್ ಬಾಡಿಗೆ ಪಡೆದಿದ್ದು, ರೂಮ್ನಲ್ಲಿ ಪ್ರತಿದಿನ ಬೆಳಗ್ಗೆ ಸಂಜೆ ಅಫೀಮು ಸೇವನೆ ಮಾಡುತ್ತಿದ್ದರು ಹಾಗೂ ತಮ್ಮದೇ ಸಮುದಾಯದ ಹಲವರಿಗೆ ಮಾರಾಟ ಮಾಡುತ್ತಿದ್ದರು.
ಈ ಕುರಿತಂತೆ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್ ನೇತೃತ್ವದ ತಂಡ ಬಟ್ಟೆ ಅಂಗಡಿ ಹಾಗೂ ರೂಮ್ ಮೇಲೆ ದಾಳಿ ನಡೆಸಿ ಸರಿಸುಮಾರು 3 ಲಕ್ಷ ಮೌಲ್ಯದ 388 ಗ್ರಾಂ ಅಫೀಮು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
