ದಾಳಿ ನಡೆಯದೇ ಇದ್ದರೂ ಬಿಎಸ್‍ವೈ ಡೈರಿ ಐಟಿಗೆ ಸಿಕ್ಕಿದ್ದು ಹೇಗೆ?

– ಇದು ನಕಲಿ ಡೈರಿ – ಬಿಎಸ್‍ವೈ
– ಹಳೇ ತಗಡು ತಂದು ಕಾಂಗ್ರೆಸ್ ಆರೋಪ – ಗೋ ಮಧುಸೂದನ್

ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪನವರು ಬಿಜೆಪಿಗೆ ಮತ್ತು ಪಕ್ಷದ ನಾಯಕರಿಗೆ ಒಟ್ಟು 1800 ಕೋಟಿ ರೂ. ನೀಡಿದ್ದಾರೆ ಎಂದು ಬರೆಯಲ್ಪಟ್ಟಿರುವ ಡೈರಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಅವರು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಿಜೆಪಿ ನಾಯಕರಿಗೆ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಈ ಡೈರಿ 2017ರಿಂದ ಆದಾಯ ತೆರಿಗೆ ಇಲಾಖೆಯಲ್ಲಿದೆ. ನರೇಂದ್ರ ಮೋದಿ ಅವರು ಯಾಕೆ ಈ ಡೈರಿ ವಿಚಾರವನ್ನು ಲೋಕಪಾಲರಿಗೆ ತನಿಖೆಗೆ ನೀಡಬಾರದು ಎಂದು ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿ ಇದು ನಕಲಿ ಡೈರಿ ಆಗಿದ್ದು, ಮೋದಿ ಜನಪ್ರಿಯತೆ ಮುಂದೆ ಕುಗ್ಗಿ ಹೋಗಿರುವ ಕಾಂಗ್ರೆಸ್ ಜನರ ಮನಸ್ಸನ್ನು ತನ್ನತ್ತ ಸೆಳೆಯಲು ಸುಳ್ಳು ಡೈರಿಯನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಿದೆ.

ಆದಾಯ ತೆರಿಗೆ ಇಲಾಖೆಗೆ ಈ ಡೈರಿ ಸಿಗಬೇಕಾದರೆ ಬಿಎಸ್ ಯಡಿಯೂರಪ್ಪನವರ ನಿವಾಸದ ಮೇಲೆ ದಾಳಿ ನಡೆಸಬೇಕು. ಆದರೆ ಈ ಡೈರಿ ಐಟಿಗೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿದೆ ಎಂದು ಕ್ಯಾರವನ್ ಹೇಳಿದೆ.

ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದಾಗ ಈ ಡೈರಿ ಸಿಕ್ಕಿದೆ ಎಂದು ಕಾರವಾನ್ ತಿಳಿಸಿದೆ. ವಿಚಾರದ ಬಗ್ಗೆ ಡಿಕೆ ಶಿವಕುಮಾರ್ ಅವರನ್ನು ಡೈರಿಯ ಹಾಳೆಗಳನ್ನು ತೋರಿಸಿದಾಗ ಅವರು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 2017ರಲ್ಲಿ ವಶಪಡಿಸಿಕೊಂಡರು ಎಂದು ತಿಳಿಸಿದ್ದಾರೆ ಎಂಬುದಾಗಿ ‘ಕ್ಯಾರವಾನ್’ ಹೇಳಿದೆ.

ಬಿಎಸ್‍ವೈ ಹೇಳೋದು ಏನು?
ಈ ಹಿಂದೆಯೇ ಐಟಿ ಅಧಿಕಾರಿಗಳು ತನಿಖೆ ಮಾಡಿ ದಾಖಲೆಗಳು ಸುಳ್ಳು ಎಂದು ತಿಳಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಲು, ಸುಳ್ಳು ಸುದ್ದಿಯನ್ನು ಹರಡಲು ಹೀಗೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ನೀಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೋ.ಮಧುಸೂದನ್ ಅವರು, ಕಾಂಗ್ರೆಸ್ ಆರೋಪ ಚುನಾವಣಾ ಗಿಮಿಕ್ ಆಗಿದೆ. ಹಳೇ ತಗಡು ತಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಇಲ್ಲಿ ತನಕ ಯಡಿಯೂರಪ್ಪ ಮನೆ ಮೇಲೆ ಐಟಿ ದಾಳಿ ಆಗಿಯೇ ಇಲ್ಲ. ಅನ್ಯ ಪ್ರಕರಣದಲ್ಲಿ ಅವರ ಬರಹ ಎಂದು ಕೇಳಿಬಂದಾಗ ಐಟಿ ಯಡಿಯೂರಪ್ಪ ಅವರ ಕೈ ಬರಹ ತನಿಖೆ ನಡೆಸಿತ್ತು ಅಷ್ಟೇ. ಆಗ ಆ ಬರಹ ನಿಮ್ಮದ್ದಲ್ಲ ಎಂದು ಹೇಳಿತ್ತು. ಮದುವೆಯಾದವರು ನಾನು ನನ್ನ ಹೆಂಡತಿ ಮದುವೆ ಆಗಿದ್ದೇನೆ ಎಂದು ಬರೆದುಕೊಳ್ಳುತ್ತಾರಾ? ಸಂಸದೆ ಶೋಭಾ ಕರಂದ್ಲಾಜೆ ಸಹೋದರಿ ಎಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತಾರೆ. ಆದರೆ ಈ ಡೈರಿಯಲ್ಲಿ ಅಸಹ್ಯಕರವಾಗಿ ಉಲ್ಲೇಖ ಮಾಡಿದ್ದಾರೆ ಎಂದರು.

ಡೈರಿ ‘ಪಬ್ಲಿಕ್’ ಪ್ರಶ್ನೆಗಳು
ಪ್ರಶ್ನೆ 1 – ಐಟಿ ರೈಡ್ ಮಾಡದಿದ್ದರೂ ಈ ಡೈರಿ ಸಿಕ್ಕಿದ್ದಾದ್ರೂ ಹೇಗೆ?
ಪ್ರಶ್ನೆ 2 – ನಕಲಿ ಅನ್ನೋದಾದ್ರೆ ಈ ಡೈರಿಯನ್ನು ಐಟಿಗೆ ತಲುಪಿಸಿದಾದ್ರೂ ಯಾರು?
ಪ್ರಶ್ನೆ 3 – 2017ರಿಂದ ಐಟಿ ವಶದಲ್ಲಿರೋ ಡೈರಿ ಅಸಲಿಯೋ? ನಕಲಿಯೋ?
ಪ್ರಶ್ನೆ 4 – ತನಿಖೆ ನಡೆದು ನಕಲಿ ಅಂತ ಬಿಎಸ್‍ವೈ ಹೇಳಿದಾಗ ಡೈರಿ ಇದೆ ಅಂತ ಅರ್ಥವೇ?

Leave a Reply

Your email address will not be published. Required fields are marked *