Tuesday, 17th September 2019

Recent News

ದೆಹಲಿ, ಹರ್ಯಾಣದಲ್ಲಿ ಆಪ್- ಕಾಂಗ್ರೆಸ್ ಮೈತ್ರಿ

– ದೆಹಲಿಯಲ್ಲಿ ಕಾಂಗ್ರೆಸ್‍ಗೆ 3, ಎಎಪಿಗೆ 4 ಸೀಟು ಹಂಚಿಕೆ

ನವದೆಹಲಿ: ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಆಮ್ ಆದ್ಮಿ ಪಾರ್ಟಿ (ಎಎಪಿ) ಮೈತ್ರಿ ಕುರಿತು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದ್ದು, ದೆಹಲಿ ಅಷ್ಟೇ ಅಲ್ಲದೇ ಹರ್ಯಾಣದಲ್ಲೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ.

ಮೈತ್ರಿ ಒಪ್ಪಂದದಂತೆ ದೆಹಲಿಯ ಒಟ್ಟು 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‍ಗೆ 3 ಹಾಗೂ ಎಎಪಿಗೆ 4 ಸೀಟುಗಳು ಹಂಚಿಕೆಯಾಗಿವೆ. ಇತ್ತ ಹರ್ಯಾಣದಲ್ಲೂ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿಯ ಜೊತೆಗೆ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಕೈಜೋಡಿಸಿದೆ.

ಹರ್ಯಾಣದಲ್ಲಿ ಒಟ್ಟು 10 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಕಾಂಗ್ರೆಸ್ 7, ಎಎಪಿ 1 ಹಾಗೂ ಜೆಜೆಪಿ 2 ಕ್ಷೇತ್ರಗಳಿಂದ ಕಣಕ್ಕೆ ಇಳಿಯಲಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿ ಕ್ಲೀನ್ ಸ್ವೀಪ್ ಮಾಡಿತ್ತು. ಹರ್ಯಾಣದಲ್ಲಿ ಬಿಜೆಪಿ 7, ಕಾಂಗ್ರೆಸ್ 1 ಹಾಗೂ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‍ಎಲ್‍ಡಿ) 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆರಂಭದಲ್ಲಿ ಮೈತ್ರಿ ವಿಚಾರದ ಬಗ್ಗೆ ಪಕ್ಷದ ನಾಯಕರ ನಡುವೆ ಅಸಮಾಧಾನ ವ್ಯಕ್ತವಾಗಿದ್ದರೂ ಈಗ ಮಾತುಕತೆ ಯಶಸ್ವಿಯಾಗಿದೆ.

ದೆಹಲಿಯ 7 ಸ್ಥಾನಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಂಡರೆ, ಹರ್ಯಾಣದಲ್ಲಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು. ಹಲವು ಸಮೀಕ್ಷೆಗಳಲ್ಲಿ ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎನ್ನುವ ಫಲಿತಾಂಶ ಬಂದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಆಪ್ ಮಧ್ಯೆ ಮೈತ್ರಿ ವಿಚಾರ ಪ್ರಸ್ತಾಪವಾಗಿತ್ತು.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕಟ್ಟಿಹಾಕಲು ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‍ಸಿ) ಮೈತ್ರಿ ಮಾಡಿಕೊಂಡಿದೆ. ಈ ಕುರಿತು ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜದ್ ಮತ್ತು ನ್ಯಾಷನಲ್ ಕಾನ್ಫರೆನ್ಸಿನ ಫಾರೂಕ್ ಅಬ್ದುಲ್ಲಾ ಜಂಟಿಯಾಗಿ ಮೈತ್ರಿ ನಿರ್ಧಾರವನ್ನು ಪ್ರಕಟಿಸಿದ್ದರು.

Leave a Reply

Your email address will not be published. Required fields are marked *