Advertisements

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಯನ್ನು ಹೊರ ಹಾಕಿದ ಶಾಲೆ- ಪ್ರಧಾನಿಗೆ ಪತ್ರ ಬರೆದ ವಿದ್ಯಾರ್ಥಿ ತಂದೆ

ಮಡಿಕೇರಿ: ಶುಲ್ಕವನ್ನು ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಿದ ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ನಡೆದಿದೆ. ಇದರಿಂದ ಬೇಸತ್ತ ವಿದ್ಯಾರ್ಥಿಯ ತಂದೆ ಬೆಳ್ಳಿಯಪ್ಪ ಎಂಬವರು ಪ್ರಧಾನಿ ಮೋದಿ ಅವರಿಗೆ ಇ ಮೇಲ್ ಮೂಲಕ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಜೊತೆಗೆ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಅವರಿಗೂ ದೂರು ನೀಡಿದ್ದಾರೆ.

Advertisements

ಹೌದು, ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಮುತ್ತಣ್ಣ ವಿದ್ಯಾರ್ಥಿ 5ನೇ ತರಗತಿ ಓದುತ್ತಿದ್ದ. ಆದರೆ ಪೋಷಕರು ಪೂರ್ತಿ ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿ ಮುತ್ತಣ್ಣ ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಕ್ಕೆ ಹಾಕಿ ಶಾಲೆಯ ಗ್ರಂಥಾಲಯದಲ್ಲಿ ಮೂರು ದಿನಗಳ ಕಾಲ ಕೂರಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದು ವಿದ್ಯಾರ್ಥಿಯ ತಂದೆ ಬೆಳ್ಳಿಯಪ್ಪ ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಆದರೆ ಶಾಲೆಯಿಂದ ಸರಿಯಾದ ಉತ್ತರ ಬಂದಿಲ್ಲ. ಇದರಿಂದ ಬೇಸರಗೊಂಡ ವಿದ್ಯಾರ್ಥಿ ತಂದೆ, ಪ್ರಧಾನಿ ಮೋದಿಯವರಿಗೆ ಇ-ಮೇಲ್ ಮೂಲಕವೇ ದೂರು ನೀಡಿದ್ದಾರೆ. ಇದನ್ನೂ ಓದಿ: 100 ಕೋಟಿ ರೂ. ಆಸೆಗೆ ಒಂದು ಮೂಕ್ಕಾಲು ಕೋಟಿ ಹಣ ಕಳ್ಕೊಂಡ

Advertisements

ಈಗಾಗಲೇ ಶಾಲೆಗೆ 60 ಸಾವಿರ ರೂ. ಶುಲ್ಕ ಕಟ್ಟಿದ್ದೇನೆ. ಕೋವಿಡ್ ಕಾಲದಲ್ಲೂ ಶುಲ್ಕ ಜಾಸ್ತಿ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಯ ಅಜ್ಜಿಯನ್ನು ಕರೆಸಿ ಫೀಸ್ ಕಟ್ಟುವಂತೆ ಸೂಚಿಸಿ ಅಂದಿನಿಂದ ವಿದ್ಯಾರ್ಥಿಯನ್ನು ತರಗತಿಗೆ ಸೇರಿಸಿಕೊಂಡಿದ್ದಾರೆ ಎನ್ನಲಾಗಿದೆ. ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗುರುವಾರ ಕೊಡಗು ಡಿಡಿಪಿಐ ವೇದಮೂರ್ತಿ ಅವರು ಕೂರ್ಗ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ್ದಾರೆ. ಶಾಲೆಗೆ ವಿದ್ಯಾರ್ಥಿಯ ತಾಯಿ ಮತ್ತು ಅಜ್ಜಿಯನ್ನು ಕರೆಸಿ ಘಟನೆಯ ನೈಜತೆ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಯ ತಾಯಿ ಸ್ನೇಹ ಅವರು, ನಮ್ಮ ಮಗನನ್ನು ಮೂರು ದಿನಗಳ ಕಾಲ ಗ್ರಂಥಾಲಯದಲ್ಲಿ ಕೂರಿಸಿದ್ದಾರೆ. ಬಳಿಕ ನಮ್ಮ ಮಗ ತೀವ್ರ ನೋವಿನಿಂದ ಸಹಾಯವಾಣಿಗೂ ಕರೆ ಮಾಡಿ ಹೇಳಿದ್ದಾನೆ. ಶಾಲೆಯ ವರ್ತನೆಗೆ ಬೇಸತ್ತು ನಮ್ಮ ಪತಿ ಕೂಡ ಜಿಲ್ಲಾಧಿಕಾರಿ, ಬಿಇಓ ಮತ್ತು ಪ್ರಧಾನ ಮಂತ್ರಿಯವರಿಗೂ ದೂರು ನೀಡಿದ್ದರು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಮ್ಯಾನೇಜರ್ ಮಾನಸಾ, ಇದೆಲ್ಲಾ ಸುಳ್ಳು. ನಮ್ಮ ಶಾಲೆಯ ಹೆಸರು ಹಾಳು ಮಾಡುವುದಕ್ಕಾಗಿ ಇಂತಹ ಹುನ್ನಾರ ನಡೆಯುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಬೀಗ ಹಾಕಿ ಕೆಲಸಕ್ಕೆ ಹೋಗಿದ್ವಿ, ಬಂದು ನೋಡುವಾಗ ಹೆಲಿಕಾಪ್ಟರ್ ಬಿದ್ದು ಮನೆಗೆ ಹಾನಿಯಾಗಿತ್ತು: ಜೈಶಂಕರ್

Advertisements

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗ್ರಂಥಾಲಯದಲ್ಲಿ ಕೂರಿಸುತ್ತಿದ್ದರು ಎಂಬ ದೂರು ಕೇಳಿಬಂದಿದೆ. ಹೀಗಾಗಿ ಪರಿಶೀಲಿಸಿ ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದ್ದೇನೆ. ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisements
Exit mobile version