Saturday, 25th May 2019

Recent News

ಬಿಜೆಪಿ ಶಾಸಕನ ಮನೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಎ.ಮಂಜು!

– ಶತ್ರುವಿನ ಶತ್ರು ಎ.ಮಂಜುಗೆ ಮಿತ್ರ?
– ಇಂತಹ ಘಟನೆ ಎಲ್ಲೂ ಆಗಿಲ್ಲ
– ಮಾನವೀಯತೆ ದೃಷ್ಟಿಯಿಂದ ಭೇಟಿ

ಹಾಸನ: ಕಾಂಗ್ರೆಸ್‍ನ ಮಾಜಿ ಸಚಿವ ಎ.ಮಂಜು ಇಂದು ಪ್ರೀತಂಗೌಡರ ಮನೆಗೆ ಭೇಟಿ ನೀಡಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಶಾಸಕರ ಮನೆಗೆ ತೆರಳಿದ ಮಾಜಿ ಸಚಿವರು ಪ್ರೀತಂಗೌಡರ ಪೋಷಕರಿಗೆ ಈ ರೀತಿಯ ಘಟನೆಗಳಿಂದ ಭಯಪಡಬೇಡಿ ಎಂದು ಸಲಹೆ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಎ.ಮಂಜು, ಇಂತಹ ಘಟನೆಗಳು ಎಲ್ಲೂ ಆಗಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ನಾವುಗಳು ಪಾಲುದಾರರಾಗಿದ್ದೇವೆ. ಮಾಜಿ ಪ್ರಧಾನಿಗಳ ತವರಲ್ಲಿ ಈ ಘಟನೆ ಆಗಿರುವುದು ನಿಜವಾಗಲೂ ಮತದಾರನಿಗೆ ಹಾಗೂ ಪ್ರಥಮ ಪ್ರಜೆಗೆ ಮಾಡಿರುವ ಅಪಮಾನ. ಈ ಹಿಂದೆ ಕಾಂಗ್ರೆಸ್ ಮೇಲೆಯೂ ಈ ರೀತಿಯ ಹಲ್ಲೆ ನಡೆದಿತ್ತು. ರಾಜಕಾರಣದಲ್ಲಿ ಶತ್ರವೂ ಇಲ್ಲ, ಮಿತ್ರರೂ ಇಲ್ಲ. ಮಾನವೀಯತೆ ದೃಷ್ಟಿಯಿಂದ ಶಾಸಕರ ಮನೆಗೆ ಭೇಟಿ ನೀಡಿದ್ದೇನೆಯೇ ಹೊರತು ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎ.ಮಂಜು, ನಮ್ಮ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಒಳ್ಳೆಯ ಸಂಪ್ರದಾಯ ಅಲ್ಲ. ಓರ್ವ ಚುನಾಯಿತ ಪ್ರತಿನಿಧಿಗೆ ರಕ್ಷಣೆ ಇಲ್ಲದೇ ಹೋದರೆ ಸಾಮಾನ್ಯ ಜನರ ಸ್ಥಿತಿ ಏನು ಆಗಬೇಕು. ಜಿಲ್ಲೆಯ ಮಾಜಿ ಮಂತ್ರಿಯಾದ ನಾನು, ಯಾರು ಘಟನೆಯಲ್ಲಿ ಭಾಗಿಯಾಗಿದ್ದಾರೆ ಅಂತಹವರ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ನಾವು ಭಾಗಿಯಾಗಿದ್ದರಿಂದ ನಮಗೂ ಸಹ ಮುಜುಗರ ಆಗುತ್ತದೆ. ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿಯ ವೈಖರಿಯ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ರಾಜಕೀಯದಲ್ಲಿ ಯಾರು ಶತ್ರು ಮತ್ತು ಮಿತ್ರರು ಇಲ್ಲ. ಈ ರೀತಿಯ ಗಲಾಟೆಗಳು ನಡೆದಾಗ ಎಲ್ಲರ ಮನೆಗೆ ಪಕ್ಷಾತೀತವಾಗಿ ಭೇಟಿ ನೀಡಿದ್ರೆ ಮಾತ್ರ ಇಂತಹ ಘಟನೆಗಳು ಮರುಕಳಿಸಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಯಾರು ಏನು ಅಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ಚಿಂತಿಸಲ್ಲ. ಮಂಜು ಮಂಜುನಾಗಿಯೇ ಇರುತ್ತಾನೆ ಎಂದು ಹೇಳಿದರು.

 

ಪ್ರತಿ ಬಾರಿಯೂ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಎ.ಮಂಜು ಅವರ ನಡೆ ಹಾಸನ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ದೇವೇಗೌಡರ ಬದಲಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ರೆ ನಮ್ಮ ವಿರೋಧವಿದೆ ಎಂದು ಮಂಜು ಅಸಮಾಧಾನ ಹೊರಹಾಕಿದ್ದರು. ವಿಧಾನಸಭಾ ಚುನಾವಣೆಗೂ ಮೊದಲಿನಿಂದಲೂ ದೊಡ್ಡಗೌಡರು ಮತ್ತು ಮಂಜು ನಡುವೆ ಶೀತಲ ಸಮರ ಇದೆ ಎನ್ನುವ ಮಾತು ಈಗಲೂ ಹಾಸನ ಜನರ ಬಾಯಲ್ಲಿದೆ. ಈ ಮಧ್ಯೆ ಇಂದು ಪ್ರೀತಂ ಗೌಡರ ಮನೆಗೆ ಭೇಟಿ ನೀಡಿ ಮಂಜು ಹಾಸನ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಉಡುಪಿ ಮೂಲದ ರಾಹುಲ್ ಕಣಿ ಎಂಬವರ ಹಣೆ ಭಾಗಕ್ಕೆ ಕಲ್ಲು ತಾಗಿತ್ತು. ಕಲ್ಲು ತೂರಾಟದ ಬಳಿಕ ಪರಿಸ್ಥಿತಿ ಉದ್ವಿಘ್ನಗೊಂಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *